ಲಕ್ನೋ: ಕೇಂದ್ರ ವಾಯು ಕಮಾಂಡ್ನ ಹೊಸ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಭಾನುವಾರ ಅಧಿಕಾರ ವಹಿಸಿಕೊಂಡರು. ಸೇನಾಪಡೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ, ಬಲವರ್ಧನೆ ಮತ್ತು 'ಆತ್ಮನಿರ್ಭರ' ಕೇಂದ್ರಿತ ವಿವಿಧ ಯೋಜನೆಗಳ ಜಾರಿಯ ವಿಷಯಗಳಲ್ಲಿ ಅಶುತೋಷ್ ದೀಕ್ಷಿತ್ ಮುಂಚೂಣಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಡಿಸೆಂಬರ್ 6, 1986 ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್ಗೆ ನೇಮಕಗೊಂಡ ಅವರು ಪ್ರಾಯೋಗಿಕ ಪರೀಕ್ಷಾ ಪೈಲಟ್ ಮತ್ತು ಅರ್ಹತೆ ಪಡೆದ ಫ್ಲೈಯಿಂಗ್ ತರಬೇತುದಾರರಾಗಿದ್ದಾರೆ. ಇವರು ಐಎಎಫ್ನಲ್ಲಿರುವ ವಿವಿಧ ವಿಮಾನಗಳಲ್ಲಿ 3300 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದಾರೆ. ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ (ಬಾಂಗ್ಲಾದೇಶ) ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಏರ್ ಮಾರ್ಷಲ್ ದೀಕ್ಷಿತ್ ಅವರು 'ಸಫೇದ್ ಸಾಗರ್' (ಕಾರ್ಗಿಲ್) ಮತ್ತು 'ರಕ್ಷಕ್' (ಜೆ & ಕೆ ಬಂಡಾಯ ವಿರೋಧಿ ಕಾರ್ಯಾಚರಣೆಗಳು) ನಂತಹ ಹಲವಾರು ಕಾರ್ಯಾಚರಣೆಗಳು ಮತ್ತು ಯುದ್ಧ ಅಭ್ಯಾಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ತಮ್ಮ 37 ವರ್ಷಗಳ ವೃತ್ತಿ ಜೀವನದಲ್ಲಿ, ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಹಲವಾರು ಮಹತ್ವದ ಕ್ಷೇತ್ರ ಮತ್ತು ಸಿಬ್ಬಂದಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಿರಾಜ್ ಫೈಟರ್ ಸ್ಕ್ವಾಡ್ರನ್, ಪಶ್ಚಿಮ ವಲಯದಲ್ಲಿ ಮುಂಚೂಣಿ ಫೈಟರ್ ಏರ್ ಬೇಸ್ ಮತ್ತು ದಕ್ಷಿಣ ವಲಯದಲ್ಲಿ ಪ್ರಮುಖ ಫೈಟರ್ ತರಬೇತಿ ನೆಲೆಯ ಕಮಾಂಡಿಂಗ್ ಅಧಿಕಾರಿಯಾಗಿರುವ ಅವರು ವಾಯುಪಡೆಯ ಟೆಸ್ಟ್ ಪೈಲಟ್ಸ್ ಶಾಲೆಯಲ್ಲಿ ತರಬೇತು ಸಿಬ್ಬಂದಿಯಾಗಿ ಮತ್ತು ವಾಯು ಪ್ರಧಾನ ಕಚೇರಿಯಲ್ಲಿ ವಾಯು ಸಿಬ್ಬಂದಿ ವಿಭಾಗದ ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಬಮ್ರೌಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಂಟ್ರಲ್ ಏರ್ ಕಮಾಂಡ್ ನ ನೇತೃತ್ವ ವಹಿಸಿಕೊಳ್ಳುವ ಮೊದಲು, ಅವರು ವಾಯುಪಡೆಯ ಉಪ ಮುಖ್ಯಸ್ಥರಾಗಿದ್ದರು. ಏರ್ ಮಾರ್ಷಲ್ ದೀಕ್ಷಿತ್ ಅವರು ಎಲ್ಲಾ ಸನ್ನಿವೇಶಗಳಲ್ಲಿ ಸೆಂಟ್ರಲ್ ಏರ್ ಕಮಾಂಡ್ನ ಕಾರ್ಯಾಚರಣೆಯ ಸನ್ನದ್ಧತೆಯು ತಮ್ಮ ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಎತ್ತಿ ತೋರಿಸಿದ್ದಾರೆ. ಅವರು ಅತ್ಯುತ್ತಮ ಸೇವೆಗಾಗಿ ಅತಿ ವಿಶಿಷ್ಟ ಸೇವಾ ಪದಕ, ವಾಯುಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕವನ್ನು ಪಡೆದಿದ್ದಾರೆ.
ಇದನ್ನೂ ಓದಿ : ಭಾರತದೊಳಗೆ ನುಸುಳಿದ 7 ಬಾಂಗ್ಲಾದೇಶಿಯರು, ಇಬ್ಬರು ರೋಹಿಂಗ್ಯಾಗಳ ಬಂಧನ - Bangladeshis Infiltrating India