ಹೈದರಾಬಾದ್: ಭಾರತದ ವೈವಿಧ್ಯತೆಯನ್ನು ವಿವರಿಸಲು ಭಾರತೀಯರನ್ನು ಬೇರೆ ರಾಷ್ಟ್ರದವರಿಗೆ ಹೋಲಿಕೆ ಮಾಡಿದ್ದ ಎಡವಟ್ಟು ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ತಮ್ಮ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂಗೀಕರಿಸಿದ್ದಾರೆ.
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ ಪಿತ್ರೋಡಾ, ಪೂರ್ವ ಭಾರತೀಯರು ಚೀನಿಯರಂತೆ, ದಕ್ಷಿಣ ಜನತೆ ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದರು. ಅಲ್ಲದೇ, ಇದೊಂದು ಜನಾಂಗೀಯ ಹೇಳಿಕೆ ಎಂದು ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿತ್ತು.
ಇದರ ಬೆನ್ನಲ್ಲೇ ಸ್ಯಾಮ್ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. ಸ್ಯಾಮ್ ಪಿತ್ರೋಡಾ ಅವರು ತಮ್ಮ ಸ್ವಂತ ಇಚ್ಛೆಯಿಂದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಇವರು ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ" ಎಂದು ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದು ವಿವಾದ?: ಭಾರತದ ವೈವಿಧ್ಯತೆಗೆ ಒತ್ತು ಕೊಡುವ ಭರದಲ್ಲಿ ಸ್ಯಾಮ್ ಪಿತ್ರೋಡಾ ವಿವಾದ ಸೃಷ್ಟಿಸಿದ್ದರು. ವಿಶ್ವದಲ್ಲಿ ಭಾರತವು ಪ್ರಜಾಪ್ರಭುತ್ವದ ಅದ್ಭುತವಾದ ಉದಾಹರಣೆ. ಅಲ್ಲಿ, ಇಲ್ಲಿ ಕೆಲವು ಗಲಾಟೆಗಳನ್ನು ಹೊರತು ಪಡಿಸಿದರೆ, ನಾವು ಭಾರತದಂತಹ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು. ಪೂರ್ವ ಭಾರತದ ಜನರು ಚೀನಿಯರಂತೆ ಕಾಣುತ್ತಾರೆ. ದಕ್ಷಿಣ ಭಾರತದ ಜನತೆ ಆಫ್ರಿಕನ್ನರಂತೆ ಕಾಣುತ್ತಾರೆ. ಪಶ್ಚಿಮ ಭಾರತದಲ್ಲಿರುವ ಜನರು ಅರಬ್ಬರಂತೆ ಕಾಣುತ್ತಾರೆ. ಉತ್ತರ ಭಾರತದಲ್ಲಿರುವ ಜನರು ಬಹುಶಃ ಬಿಳಿಯರಂತೆ ಕಾಣುತ್ತಾರೆ. ಇದು ನಾನು ನಂಬುವ ಭಾರತವಾಗಿದೆ ಎಂದು ಹೇಳಿಕೆ ನೀಡಿದ್ದರು.
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ಮೋದಿ ಕಿಡಿಕಾರಿದ್ದರು. ಚರ್ಮದ ಬಣ್ಣದ ಆಧಾರದ ಮೇಲೆ ಅವಮಾನಿಸುವುದನ್ನು ದೇಶದ ಜನರು ಸಹಿಸುವುದಿಲ್ಲ. ಕಪ್ಪು ಚರ್ಮ ಇರುವವರು ಆಫ್ರಿಕಾದವರು ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಇದರರ್ಥ ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ. ಈ ಬಗ್ಗೆ ರಾಹುಲ್ ಗಾಂಧಿ ಉತ್ತರಿಸಬೇಕಾಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: 'ಪೂರ್ವ ಭಾರತದವರು ಚೀನಿಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ ಕಾಣ್ತಾರೆ'; ಪಿತ್ರೋಡಾ ಎಡವಟ್ಟು, ಮೋದಿ ಆಕ್ರೋಶ