ನವದೆಹಲಿ: ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ, ದೇವರು ನನ್ನನ್ನು ಪ್ರತಿ ಹಂತದಲ್ಲೂ ಬೆಂಬಲಿಸಿದ್ದಾನೆ. ಈ ಬಾರಿಯೂ ದೇವರು ನನ್ನನ್ನು ಕೈಬಿಡಲಿಲ್ಲ, ಏಕೆಂದರೆ ನಾನು ಪ್ರಾಮಾಣಿಕನಾಗಿದ್ದೇನೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯ ತಿಹಾರ್ ಜೈಲಿನ ಹೊರಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.
ಭರ್ಜರಿ ಸ್ವಾಗತ ಕೋರಿದ ಎಎಪಿ ಬೆಂಬಲಿಗರು: ಇದಕ್ಕೂ ಮುನ್ನ ಮಳೆಯ ನಡುವೆ ಅರವಿಂದ್ ಕೇಜ್ರಿವಾಲ್ ಅವರನ್ನು ಸ್ವಾಗತಿಸಲು ಪಂಜಾಬ್ ಸಿಎಂ ಭಗವಂತ್ ಮಾನ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್ ಸೇರಿದಂತೆ ಆಪ್ ಕಾರ್ಯಕರ್ತರು ಮತ್ತು ಮುಖಂಡರು ತಿಹಾರ್ ಜೈಲಿನ ಹೊರಗೆ ಹಾಜರಾಗಿದ್ದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಕೇಜ್ರಿವಾಲ್ ಇಂದು ತಿಹಾರ್ ಜೈಲಿನಿಂದ ಬಿಡುಗಡೆಯಾದರು.
ಕೇಜ್ರಿವಾಲ್ ಜೈಲಿನಿಂದ ಹೊರಬರುತ್ತಿದ್ದಂತೆ ನೂರಾರು ಎಎಪಿ ಕಾರ್ಯಕರ್ತರು ಮತ್ತು ಮುಖಂಡರು ‘ಭಾರತ್ ಮಾತಾ ಕಿ ಜೈ’ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ಅವರನ್ನು ಭರ್ಜರಿಯಾಗೇ ಸ್ವಾಗತಿಸಿದರು. ಪಕ್ಷದ ಕಾರ್ಯಕರ್ತರು ಅವರ ಬಿಡುಗಡೆಯನ್ನು ಸಂಭ್ರಮಿಸಿದರು. ಜೈಲುವಾಸದಿಂದ ಅವರ ಧೈರ್ಯ ಮತ್ತು ಚೈತನ್ಯ ಮತ್ತಷ್ಟು ಗಟ್ಟಿಯಾಗಿದೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಹೆಚ್ಚು ಶಕ್ತಿ ಮತ್ತು ಚೈತನ್ಯ ಅವರಿಗೆ ಸಿಕ್ಕಿದೆ ಎಂದು ಅಭಿಮಾನಿಗಳು ಗುಡುಗಿದರು.
ಅಪಾರ ಅಭಿಮಾನಿಗಳ ಸ್ವಾಗತದ ಬಳಿಕ ಮಾತನಾಡಿದ ಅವರು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಜೈಲುಗಳು ತಮ್ಮ ಸಂಕಲ್ಪಕ್ಕೆ ಸಂಕೋಲೆಯನ್ನು ಹಾಕುವುದಿಲ್ಲ ಮತ್ತು ಹೆಚ್ಚಿನ ಸಂಕಲ್ಪದೊಂದಿಗೆ ಜನರ ಸೇವೆಗೆ ಮರಳುತ್ತೇನೆ ಎಂದು ಹೇಳಿದರು. ನಾನು ಭಾರತ-ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ಇಂದು ನಾನು ಈ ಹೋರಾಟವನ್ನು ಮೊದಲಿಗಿಂತ ಹೆಚ್ಚಿನ ತೀವ್ರತೆಯೊಂದಿಗೆ ಹೆಚ್ಚಿಸಲು ಪ್ರತಿಜ್ಞೆ ಮಾಡುತ್ತೇನೆ ಎಂದು ಕೇಜ್ರಿವಾಲ್ ಘೊಷಿಸಿದರು.
ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂಗೆ ಜಾಮೀನು ಸಿಕ್ಕಿದೆ ನಿಜ, ಆದರೆ ಅವರ ಅಧಿಕಾರವನ್ನು ತೀವ್ರವಾಗಿ ಮೊಟಕುಗೊಳಿಸಲಾಗಿದೆ. ಸೆಕ್ರೆಟರಿಯೇಟ್‌ಗೆ ಭೇಟಿ ನೀಡದಂತೆ ಅಥವಾ ಯಾವುದೇ ಫೈಲ್‌ಗಳಿಗೆ ಸಹಿ ಹಾಕದಂತೆ ಅವರಿಗೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ.
ಕೇಜ್ರಿವಾಲ್ಗೆ ಸುಪ್ರೀಂ ಹಾಕಿರುವ ಷರತ್ತುಗಳಿವು:
- ಅರವಿಂದ್ ಕೇಜ್ರಿವಾಲ್ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ. ಇಡಿ ವಿಷಯದಲ್ಲಿ ವಿಧಿಸಲಾದ ಷರತ್ತುಗಳು ಈ ಪ್ರಕರಣಕ್ಕೂ ಅನ್ವಯಿಸುತ್ತವೆ.
- ಅವರು ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯಕ್ಕೆ ಭೇಟಿ ನೀಡುವಂತಿಲ್ಲ
- ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ/ಅನುಮೋದನೆ ಪಡೆಯದೇ ಅಧಿಕೃತ ಕಡತಗಳಿಗೆ ಸಹಿ ಹಾಕುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.
- ಪ್ರಸ್ತುತ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ.
ಇದನ್ನು ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಕೊನೆಗೂ ಸಿಕ್ತು ಜಾಮೀನು - Arvind Kejriwal