ಚೆನ್ನೈ: ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಭಾರತದ ಚುನಾವಣಾ ಆಯೋಗದಿಂದ ಮಾನ್ಯತೆ ಸಿಕ್ಕಿದೆ ಎಂದು ತಮಿಳು ಸೂಪರ್ ಸ್ಟಾರ್ ವಿಜಯ್ ಹೇಳಿದ್ದಾರೆ. ತಮ್ಮ ಪಕ್ಷವು ಈಗ ಚುನಾವಣಾ ಸಮರಕ್ಕೆ ಸಿದ್ಧವಾಗಿದೆ ಮತ್ತು ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 2024ರಲ್ಲಿ ವಿಜಯ್ ತಮ್ಮದೇ ಆದ ಸ್ವಂತ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಟಿವಿಕೆ ಪಕ್ಷವು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಷದ ಗುರಿಯಾಗಿದೆ ಎಂದು ಆಗ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ತಮ್ಮ ಅಭಿಮಾನಿ ಸಂಘ ವಿಜಯ್ ಮಕ್ಕಳ್ ಇಯಕ್ಕಂ ಕಳೆದ ಹಲವಾರು ವರ್ಷಗಳಿಂದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಆದರೆ ರಾಜಕೀಯ ಅಧಿಕಾರವಿಲ್ಲದೆ ಅದು ತನ್ನದೇ ಆದ ಪೂರ್ಣ ಪ್ರಮಾಣದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ತರಲು ಸಾಧ್ಯವಿಲ್ಲ ಮತ್ತು ಅದಕ್ಕಾಗಿ ರಾಜಕೀಯ ಅಧಿಕಾರದ ಅಗತ್ಯವಿದೆ ಎಂದು ವಿಜಯ್ ಆಗ ಹೇಳಿದ್ದರು.
ನಟ ವಿಜಯ್ ಅವರು ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಕೃತಿಯನ್ನು ಆಗಾಗ ಪ್ರಸ್ತಾಪಿಸಿ ಅದರಲ್ಲಿನ 'ಎನ್ನಿ ತುನಿಗಾ ಕರ್ಮಂ' (ಸೂಕ್ತ ಪರಿಶೀಲನೆಯ ನಂತರವೇ ಕೆಲಸ) ಎಂಬ ಮಾತನ್ನು ಉಲ್ಲೇಖಿಸುತ್ತಿದ್ದರು.
ಪಕ್ಷವನ್ನು ಔಪಚಾರಿಕವಾಗಿ ನೋಂದಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಮತ್ತು ಜನವರಿಯಲ್ಲಿ ಚೆನ್ನೈನಲ್ಲಿ ನಡೆದ ಟಿವಿಕೆ ಸಭೆಯಲ್ಲಿ ಪಕ್ಷದ ನಾಯಕ, ಕಾರ್ಯಕರ್ತರು ಮತ್ತು ಪಕ್ಷದ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಅನುಮೋದಿಸಲಾಗಿದೆ ಎಂದು ಜನಪ್ರಿಯ ನಟ ವಿಜಯ್ ತಿಳಿಸಿದ್ದರು.
ಆಗಸ್ಟ್ನಲ್ಲಿ ವಿಜಯ್ ತಮ್ಮ ಪಕ್ಷದ ಧ್ವಜವನ್ನು ಬಿಡುಗಡೆ ಮಾಡಿದ್ದಾರೆ. ಧ್ವಜದ ವಿನ್ಯಾಸವು ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಕೆಂಪು ಮತ್ತು ಮಧ್ಯದಲ್ಲಿ ಹಳದಿ ಬಣ್ಣವನ್ನು ಹೊಂದಿದೆ. ಮಧ್ಯದಲ್ಲಿ 28 ನಕ್ಷತ್ರಗಳಿಂದ ಸುತ್ತುವರೆದಿರುವ ವಾಗೈಯನ್ನು ಹೋಲುವ ಹೂವು, ಅದರ ಎರಡೂ ಬದಿಗಳಲ್ಲಿ ಎರಡು ತುತ್ತೂರಿ ಊದುವ ಆನೆಗಳು ಪರಸ್ಪರ ಎದುರಾಗಿ ನಿಂತಿರುವುದನ್ನು ಧ್ವಜದಲ್ಲಿ ಚಿತ್ರಿಸಲಾಗಿದೆ. ಪ್ರಾಚೀನ ತಮಿಳು ರಾಜರು ತಮ್ಮ ವಿಜಯದ ಸಂಕೇತವಾಗಿ ವಾಗೈ ಹೂವಿನ ಹಾರಗಳನ್ನು ಧರಿಸುತ್ತಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ಪುದುಚೇರಿಯ ಮಾಜಿ ಶಾಸಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಅಲಿಯಾಸ್ 'ಬುಸ್ಸಿ' ಆನಂದ್ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರ ನಿಯೋಗವು ಭಾರತದ ಚುನಾವಣಾ ಆಯೋಗವನ್ನು ಸಂಪರ್ಕಿಸಿದೆ ಎಂದು ಟಿವಿಕೆ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ಪಕ್ಷವು ಮೇ ತಿಂಗಳಲ್ಲಿ ಕಾನೂನು ನೋಟಿಸ್ಗಳನ್ನು ಪ್ರಕಟಿಸಿ ಪಕ್ಷದ ನೋಂದಣಿಗೆ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಪ್ರಕಟಣೆ ನೀಡಿತ್ತು. ವೇಲ್ ಮುರುಗನ್ನ ತಮಿಳಗ ವಜ್ವುರಿಮೈ ಕಚ್ಚಿ ಎಂಬ ಹೆಸರಿನ ಟಿವಿಕೆ ಎಂಬ ಸಂಕ್ಷಿಪ್ತ ರೂಪಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಈಗ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ ಮತ್ತು ಪಕ್ಷಕ್ಕೆ ಔಪಚಾರಿಕ ಇಸಿಐ ಮಾನ್ಯತೆ ಸಿಕ್ಕಿದೆ ಎಂದು ವಿಜಯ್ ಘೋಷಿಸಿದ್ದಾರೆ.
2021ರ ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ನಟನ ಅಭಿಮಾನಿ ಸಂಘ ಆಲ್ ಇಂಡಿಯಾ ತಲಪತಿ ವಿಜಯ್ ಮಕ್ಕಳ್ ಇಯಕ್ಕಂ (ಎಐಟಿವಿಎಂಐ) ಸದಸ್ಯರು ತಾವು ಸ್ಪರ್ಧಿಸಿದ 169 ಸ್ಥಾನಗಳ ಪೈಕಿ 115 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಮತ್ತು ನಟ-ನಿರ್ದೇಶಕ ಸೀಮನ್ ಅವರ ನಾಮ್ ತಮಿಳರ್ ಕಚ್ಚಿ (ಎನ್ ಟಿಕೆ) ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿವೆ.
ಇದನ್ನೂ ಓದಿ: ಟಿಎಂಸಿ ಸಂಸದ ಜವಾಹರ್ ಸರ್ಕಾರ್ ರಾಜೀನಾಮೆ: ಮಮತಾ ಸರ್ಕಾರದ ಭ್ರಷ್ಟಾಚಾರ ಸಹಿಸಲ್ಲ ಎಂದ ಮುಖಂಡ - Jawahar Sarkar Resigns