ವೆಲ್ಲೂರು: ತಮಿಳುನಾಡಿನ ವೆಲ್ಲೂರಿನಿಂದ 25 ಕಿ.ಮೀ ದೂರವಿರುವ ಕಮ್ಮವನ್ಪೆಟ್ಟೈ ಎಂಬ ಗ್ರಾಮ ವಿಶೇಷತೆಯಿಂದ ಕೂಡಿದೆ. ಈ ಗ್ರಾಮದಲ್ಲಿರುವ ನಿವಾಸಿಗಳು ಕಳೆದ 70 ವರ್ಷಗಳಿಂದ ದೇಶ ಸೇವೆಗೆ ತಮ್ಮನ್ನು ಮುಡಿಪಾಗಿರಿಸಿದ್ದಾರೆ. ಇಲ್ಲಿ ಒಂದು ಮನೆಯಲ್ಲಿಯೇ ಒಂದಕ್ಕಿಂತ ಹೆಚ್ಚು ಸೈನಿಕರಿದ್ದು, ಸೇನೆ ಸೇರಲು ಯುವ ಪೀಳಿಗೆ ಕೂಡ ಸಜ್ಜಾಗಿದ್ದಾರೆ.
1972ರಲ್ಲಿ ಈ ಗ್ರಾಮದ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಮಿಳುನಾಡಿನ ಅಂದಿನ ರಾಜ್ಯಪಾಲ ಕೆ.ಕೆ. ಶಾ ಇಲ್ಲಿ ಸಾವಿರಾರು ಮಂದಿ ಸೇನಾ ಸಮವಸ್ತ್ರದಲ್ಲಿರುವುದನ್ನು ಕಂಡು ಒಂದು ನಿಮಿಷ ಬೆರಗಾಗಿದ್ದರು. ಬಳಿಕ ಆ ಜನರಲ್ಲಿನ ದೇಶ ಸೇವೆಯ ಮನೋಭಾವ ಕಂಡು ಈ ಗ್ರಾಮಕ್ಕೆ ಸೇನಾ ಪೆಟ್ಟಾ ಎಂದು ನಾಮಕರಣ ಮಾಡಿದರು.
ಪ್ರತಿ ಮನೆಯಲ್ಲೂ ಯೋಧರು; ಈ ಗ್ರಾಮದಲ್ಲಿ ಸದ್ಯ 4,500 ಕುಟುಂಬಗಳಿದ್ದು, ಕೃಷಿ ಇವರ ಮೂಲ ಕಸುಬಾಗಿದೆ. ಆದರೆ, 4000ಕ್ಕೂ ಹೆಚ್ಚು ಕುಟುಂಬಗಳಿದ್ದರೆ ಪ್ರತಿ ಮನೆಯಲ್ಲೂ ಯೋಧರು ಇದ್ದಾರೆ.
ಸದ್ಯ ಗ್ರಾಮದಲ್ಲಿ 2,500 ಮಂದಿ ಸೇನೆಯಲ್ಲಿದ್ದು, ನೌಕಾಸೇನೆ, ಭೂ ಸೇನೆ, ವಾಯು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಕುಟುಂಬದಲ್ಲಿ ಕನಿಷ್ಠ ಒಂದರಿಂದ ನಾಲ್ಕು ಮಂದಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಗ್ರಾಮದ ಯುವ ಪೀಳಿಗೆಯ ಕನಸು ಕೂಡ ಸೇನೆ ಸೇರಿ, ದೇಶ ಸೇವೆ ಸಲ್ಲಿಸಬೇಕು ಎನ್ನುವುದಾಗಿದೆ. ಸೇನೆ ಸೇರುವ ಉದ್ದೇಶದಿಂದಲೇ ಈ ಗ್ರಾಮದ ವಿದ್ಯಾರ್ಥಿಗಳು ಓದುತ್ತಾರೆ. ಇವರ ಕನಸಿಗೆ ನೆರವಾಗಲು ಗ್ರಾಮದಲ್ಲಿ ವಿಶೇಷ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಮಾಜಿ ಸೈನಿಕರು ಕೂಡ ವಿದ್ಯಾರ್ಥಿಗಳನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿರುವ ನಂದಕುಮಾರ್ ಎಂಬ ವಿದ್ಯಾರ್ಥಿ, ಗ್ರಾಮದಲ್ಲಿ ಹಲವಾರು ಕುಟುಂಬಗಳ ಸದಸ್ಯರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವ ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನನ್ನ ಗುರಿ ಕೂಡ 12ನೇ ತರಗತಿ ಬಳಿಕ ಸೇನೆಗೆ ಸೇರಿ ಸೈನಿಕನಾಗಬೇಕು ಎನ್ನುತ್ತಾರೆ.
2ನೇ ವಿಶ್ವ ಯುದ್ಧದಿಂದ ಕಾರ್ಗಿಲ್ ಯುದ್ಧದವರೆಗೆ: ತಮ್ಮ ಗ್ರಾಮದ ಕುರಿತು ಹೆಮ್ಮೆಯಿಂದ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಕವಿತಾ ಮುರುಗನ್, ನಮ್ಮ ಗ್ರಾಮ ಸೇನಾ ಶಿಬಿರವಾಗಿದೆ. ಶಾಲೆ ಮುಗಿಸಿ ಸೇನೆ ಸೇರಬೇಕು ಎಂಬ ವಿದ್ಯಾರ್ಥಿಗಳ ತರಬೇತಿಗೆ ನೆರವಾಗಲು ಎರಡು ತರಬೇತಿ ಕೇಂದ್ರ ನಡೆಸಲಾಗುತ್ತಿದೆ. ಈ ಕೇಂದ್ರಗಳಿಂದ ಪ್ರತಿ ವರ್ಷ 100 ರಿಂದ 200 ಯುವಕರು ಸೇನೆಗೆ ಆಯ್ಕೆಯಾಗುತ್ತಾರೆ. ನಮ್ಮ ಗ್ರಾಮದಲ್ಲಿ 2ನೇ ಮಹಾಯುದ್ಧದ ಆರಂಭದಿಂದ ಕಾರ್ಗಿಲ್ ಯುದ್ಧದವರೆಗೆ ನಮ್ಮ ಹಳ್ಳಿಯ ಸೈನಿಕರು ಸೇವೆ ಸಲ್ಲಿಸಿದ್ದಾರೆ ಎಂಬುದು ಹೆಮ್ಮೆ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಯೋಧರ ದೇಶಪ್ರೇಮ; ಮಾಜಿ ಯೋಧ ಚಂದ್ರಣ್ಣ ಮಾತನಾಡಿ, 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ದೇಶಕ್ಕಾಗಿ ಈ ಜೀವನ, ದೇಹವು ಮಣ್ಣಿಗಾಗಿ ಎಂಬ ತತ್ವ ಹೊಂದಿದ್ದೇನೆ. ಸೇನೆ ಮತ್ತು ದೇಶಕ್ಕಾಗಿ ದುಡಿಯುವ ಮನೋಭಾವ ಯುವಕರಲ್ಲಿ ಮೂಡಬೇಕು ಎಂದು ಕರೆ ನೀಡಿದರು.
ಮಾಜಿ ಯೋಧ ವಿಶ್ವನಾಥನ್ ಮಾತನಾಡಿ, 1973ರಿಂದ 2006ರ ವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನಮ್ಮ ಗ್ರಾಮದಲ್ಲಿ ಈವರೆಗೆ ಸುಮಾರು 3 ಸಾವಿರ ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಈ ವೀರ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು.
ಇದನ್ನೂ ಓದಿ: 19 ವರ್ಷ ದೇಶ ಸೇವೆ ಮಾಡಿ ತಾಯ್ನಾಡಿಗೆ ಮರಳಿದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ