ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸ್ವಾಗತಿಸಿದ್ದು, "ಸತ್ಯಕ್ಕೆ ತೊಂದರೆ ನೀಡಬಹುದು, ಆದರೆ ಅದನ್ನು ಸೋಲಿಸಲು ಸಾಧ್ಯವಿಲ್ಲ" ಎಂದು ಬಣ್ಣಿಸಿದೆ.
ಈ ಕುರಿತು ಪೋಸ್ಟ್ ಮಾಡಿರುವ ಎಎಪಿ ಸಂಸದ ರಾಘವ್ ಚಡ್ಡಾ, ಅರವಿಂದ್ ಕೇಜ್ರಿವಾಲ್ ಅವರಿಗೆ ಸ್ವಾಗತ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡಿದ್ದೆವು. ಸತ್ಯಕ್ಕೆ ತೊಂದರೆ ನೀಡಬಹುದು. ಆದರೆ, ಸೋಲಿಸಲು ಸಾಧ್ಯವಿಲ್ಲ. ಅಂತಿಮವಾಗಿ ಗೌರವಾನ್ವಿತ ಸುಪ್ರೀಂ ಕೋರ್ಟ್ ದೆಹಲಿಯ ಪುತ್ರ ಅರವಿಂದ್ ಕೇಜ್ರಿವಾಲ್‌ರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ, ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ದೆಹಲಿ ಸಚಿವೆ ಅತಿಶಿ, ಸತ್ಯಮೇವ ಜಯತೇ ಎಂದು ಪೋಸ್ಟ್ ಮಾಡಿದ್ದಾರೆ.
ಕೇಜ್ರಿವಾಲ್ ಪತ್ನಿ ಸುನೀತಾ ಹರ್ಷ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ನಮ್ಮ ಪರವಾಗಿ ಬಲವಾಗಿ ನಿಂತಿದ್ದಕ್ಕೆ ಎಎಪಿ ಕುಟುಂಬಕ್ಕೆ ಧನ್ಯವಾದಗಳು. ನಮ್ಮ ಇತರೆ ನಾಯಕರೂ ಶೀಘ್ರದಲ್ಲೇ ಬಿಡುಗಡೆಯಾಗಲಿ ಎಂದು ಆಶಿಸಿದ್ದಾರೆ.
Congratulations to AAP family!🎉😊Kudos for staying strong 👏🏻Wishing also the soonest release of our other leaders.
— Sunita Kejriwal (@KejriwalSunita) September 13, 2024
ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸುಪ್ರೀಂ ಕೋರ್ಟ್ ನಿರ್ಧಾರ ಸ್ವಾಗತಿಸಿದ್ದು, ಸುಳ್ಳು ಮತ್ತು ಪಿತೂರಿ ವಿರುದ್ಧ ಮತ್ತೊಮ್ಮೆ ಸತ್ಯ ಗೆಲುವು ಕಂಡಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಪ್ರತಿಕ್ರಿಯಿಸಿ, ಮೊದಲಿಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರಿಗೆ ಜಾಮೀನು ಸಿಕ್ಕಿತು. ಇದೀಗ ಅರವಿಂದ್ ಕೇಜ್ರಿವಾಲ್ ಅವರಿಗೆ ದೊರೆತಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷಗಳ ವಿರುದ್ಧ ದುರ್ಬಳಕೆ ಮಾಡಿ ದೇಶದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕೊನೆಗೂ ಸಿಕ್ತು ಜಾಮೀನು