ಕಾಸರಗೋಡು (ಕೇರಳ) : ಮಾನವ ಸಂಬಂಧಗಳೇ ಗಟ್ಟಿಯಾಗಿರದಂತಹ ಇಂದಿನ ಕಾಲದಲ್ಲಿ ಹಿರಿಯ ರೈತ ಹಾಗೂ ಹಸುವಿನ ನಡುವಿನ ದಶಕಗಳ ಬಾಂಧವ್ಯ ಮೆಚ್ಚುವಂತಹದ್ದೇ. ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬ ಸಣ್ಣ ಪಟ್ಟಣ. ಈ ಊರಿನ ಹಿರಿಯ ವ್ಯಕ್ತಿ ಉಮೇಶ್ ರಾವ್ ಅವರು ವರ್ಷಗಳಿಂದ ಗೈಮೈ ಎಂಬ ಹಸುವನ್ನು ಸ್ವಂತ ಮಗಳಂತೆ ಸಾಕುತ್ತಿದ್ದಾರೆ. ಇಬ್ಬರಿಗೂ ವಯಸ್ಸಾಗಿದೆ. ಆದರೆ ಆ ವಯಸ್ಸು ಇಬ್ಬರ ನಡುವಿನ ಪ್ರೀತಿಗೆ ಅಡ್ಡಿಯಾಗಿಲ್ಲ. ಪ್ರೀತಿ, ವಾತ್ಸಲ್ಯ ಮರೆಯಾಗುತ್ತಿರುವ ಇಂದಿನ ಯುಗದಲ್ಲಿ ಈ ಸಂಬಂಧ ಮಾನವೀಯತೆಗೆ ಸಾಕ್ಷಿಯಂತಿದೆ.
ಉಮೇಶ್ ರಾವ್ ಅವರಿಗೆ ಈಗ 86 ವರ್ಷ, ಬೆನ್ನು ಬಾಗಿದೆ. ಉಮೇಶ್ ರಾವ್ ತಮ್ಮ ಜೀವನದ ಬಹುಪಾಲು ಸಮಯ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವುದರಲ್ಲಿ ಕಳೆದಿದ್ದಾರೆ. ಈ ಗೈಮೈ ಹಾಗೂ ಉಮೇಶ್ ರಾವ್ ಅವರ ಬಾಂಧವ್ಯ ಇಂದು ನಿನ್ನೆಯದಲ್ಲ. ಈ ಸಂಬಂಧ 23 ವರ್ಷ ಹಳೆಯದು. ಈ ಬಾಂಧವ್ಯದ ಕಥೆ ಗೈಮೈ ಹಸುವಿನಿಂದ ಪ್ರಾರಂಭವಾಗುವುದಿಲ್ಲ. 30 ವರ್ಷಗಳ ಹಿಂದೆ ಹಸು ಸಾಕಬೇಕು ಎಂಬ ಬಯಕೆಯಿಂದ ಚೆರುವತ್ತೂರ್ನಿಂದ ಗೈಮೈ ಹಸುವಿನ ತಾಯಿಯನ್ನು ಖರೀದಿಸಿ ತಂದಿದ್ದರು. ಅದರ ಕರುವೇ ಈಗಿರುವ ಗೈಮೈ.
ದಿನ ಕಳೆದಂತೆ ಈ ಹಸುವಿನ ಜೊತೆಗೆ ಉಮೇಶ್ ಅವರ ಬಾಂಧವ್ಯ ಗಾಢವಾಯಿತು. ಈ ಮಧ್ಯೆ ಗೈಮೈಯ ತಾಯಿಯನ್ನು ವೃದ್ಧಾಪ್ಯದ ಕಾರಣ ಮಾರಿದರೂ, ಗೈಮೈಯನ್ನು ಮಾತ್ರ ತಮ್ಮ ಜೊತೆಗೆ ಇಟ್ಟುಕೊಂಡಿದ್ದಾರೆ. ಈಗ ಗೈಮೈಯ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಐದು ತಲೆಮಾರುಗಳು ಉಮೇಶ್ ರಾವ್ ಅವರೊಂದಿಗೆ ಇವೆ. ಐದನೇ ತಲೆಮಾರಿನ ಕರುವಿಗೆ ಎಂಟು ತಿಂಗಳು.
ಗೈಮೈ, ಉಮೇಶ್ ಅವರಿಗೆ ಕೇವಲ ಹಸುವಲ್ಲ, ಅದು ಕೂಡ ಅವರ ಕುಟುಂಬದ ಒಬ್ಬ ಪ್ರೀತಿಯ ಸದಸ್ಯೆ. ಗೈಮೈ ಹಲವಾರು ಹಸುಗಳಿಗೆ ಜನ್ಮ ನೀಡಿದ್ದು, ಉಮೇಶ್ ಅವರು ಹೆಣ್ಣು ಕರುಗಳನ್ನು ಮಾತ್ರ ತಮ್ಮೊಂದಿಗೆ ಇರಿಸಿಕೊಂಡಿದ್ದಾರೆ. ಉಮೇಶ್ ರಾವ್ ಅವರು ತೋರಿಸಿರುವ ಕಾಳಜಿ ಹಾಗೂ ಬದ್ಧತೆಗೆ ಗೈಮೈ ಕುಟುಂಬವೇ ಸಾಕ್ಷಿ. ವಯಸ್ಸು 23 ಆದರೂ ಗೈಮೈ ಹಾಗೂ ಉಮೇಶ್ ಅವರ ಪ್ರೀತಿ ವಾತ್ಸಲ್ಯ ಮಾತ್ರ ಇನ್ನೂ ಹಸಿರಾಗಿದೆ.

ಗೈಮೈ ವೃದ್ಧೆಯಾಗಿದ್ದರೂ, ಆರೋಗ್ಯ ಕೈಕೊಡುತ್ತಿದ್ದರೂ, ಉಮೇಶ್ ಅವರ ಮೇಲೆ ತೋರಿಸುವ ಆಕೆಯ ಭಕ್ತಿ ಮಾತ್ರ ಕುಗ್ಗಿಲ್ಲ. ಒಂದು ಕಾಲದಲ್ಲಿ ಗಟ್ಟಿಮುಟ್ಟಾಗಿದ್ದ ಗೈಮೈ ದೇಹ ಇಂದು ದುರ್ಬಲವಾಗಿದೆ. ಹಲ್ಲುಗಳೂ ಉದುರಿವೆ. ಆದರೆ ಉಮೇಶ್ ಅವರು ಅವಳು ಕರುವಾಗಿದ್ದಾಗ ತೋರಿಸುತ್ತಿದ್ದ ಅದೇ ಪ್ರೀತಿ, ಆತ್ಮೀಯತೆ, ವಾತ್ಸಲ್ಯವನ್ನು ಅವಳ ಮೇಲೆ ತೋರಿಸುತ್ತಿದ್ದಾರೆ.
ಉಮೇಶ್ ಅವರಿಗೆ ಗೈಮೈ ಹಸುವಿನಿಂದ ಸದ್ಯ ಯಾವುದೇ ಆದಾಯ ಇಲ್ಲ. "ನಮ್ಮಿಬ್ಬರಿಗೂ ಈಗ ಹಲ್ಲುಗಳಿಲ್ಲ" ಎಂದು ತಮಾಷೆ ಮಾಡುವ ಉಮೇಶ್, "ಇದು ಲಾಭ ಗಳಿಸುವ ಬಗ್ಗೆ ಅಲ್ಲ, ನಾನು ಅವಳೊಂದಿಗೆ ಹಂಚಿಕೊಂಡಿರುವ ಭಾವನಾತ್ಮಕ ಸಂಬಂಧ ಲಾಭಕ್ಕಿಂತ ಮಿಗಿಲು" ಎನ್ನುತ್ತಾರೆ.

ಕಳೆದ ಹಲವು ವರ್ಷಗಳಿಂದ ಹಲವಾರು ಜನ, ಗೈಮೈ ಅನ್ನು ಖರೀದಿಗೆ ನೀಡುವಂತೆ ಕೇಳಲು ಬಂದಿದ್ದಾರೆ. ಆದರೆ ಉಮೇಶ್ ಅವರು ಪ್ರತಿ ಬಾರಿಯೂ, ನಾನು ಬದುಕಿರುವವರೆಗೂ ಗೈಮೈಯನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಅವರನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಕಾಲ ಉರುಳಿದರೂ ಇಬ್ಬರ ನಡುವಿನ ಬಂಧ ಇನ್ನೂ ಗಟ್ಟಿಯಾಗಿಯೇ ಇದೆ. ಗೈಮೈ ನಂತರದ ಐದು ತಲೆಮಾರುಗಳ ಬೆಳವಣಿಗೆಯನ್ನು ಉಮೇಶ್ ಕಂಡಿದ್ದಾರೆ. ಆ ಅನುಭವವೇ ಅವರಿಗೆ ಅಮೂಲ್ಯವಾದದ್ದು.
"ಎರಡು ವರ್ಷಗಳ ಹಿಂದಿನವರೆಗೂ ಗೈಮೈ ಹಾಲು ಕೊಡುತ್ತಿದ್ದಳು. ಗೈಮೈ ನ ಐದು ತಲೆಮಾರುಗಳನ್ನು ನೋಡಿದ್ದೇನೆ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಉಮೇಶ್ ರಾವ್.

ಗೈಮೈ ಹಸು ಹಾಲ್ಸ್ಟೀನ್ ಫ್ರೀಸಿಯನ್ ತಳಿಗೆ ಸೇರಿದ್ದು. ಈ ತಳಿ 15 ರಿಂದ 20 ವರ್ಷಗಳವರೆಗೆ ಬದುಕುತ್ತವೆ. ಆದರೆ ಗೈಮೈ ತನ್ನ ತಳಿಯ ಸಾಮಾನ್ಯ ಜೀವಿತಾವಧಿಗಿಂದ ಹೆಚ್ಚು ಕಾಲ ಬದುಕಿದ್ದಾಳೆ. ಉಮೇಶ್ ಅವರ ಪ್ರೀತಿಯ ಆರೈಕೆಯಿಂದಾಗಿ, ನಿರೀಕ್ಷೆಗೂ ಮೀರಿ ಪೂರ್ಣ ಹಾಗೂ ಸಂತೋಷದ ಜೀವನ ನಡೆಸುತ್ತಿದ್ದಾಳೆ. ಗೈಮೈ ಹಸುವಿನ ಮೊದಲ ಮಗಳಿಗೆ 18 ವರ್ಷ, ಅವಳ ಮೊಮ್ಮಗಳಿಗೆ 13 ವರ್ಷ, ಮರಿ ಮೊಮ್ಮಗಳಿಗೆ 10 ವರ್ಷ, ಅವಳ ಮಗನಿಗೆ 8 ತಿಂಗಳು.
ಇದನ್ನೂ ಓದಿ: ತಂದೆ ಮೇಲಿನ ಹಠಕ್ಕೆ ಕಿಕ್ ಬಾಕ್ಸರ್ ಆದ ಬೀಬಿ ಫಾತಿಮಾ : ಸಾಧಕಿಯ ಬೆನ್ನಿಗೆ ನಿಂತ ಮಂಗಳಮುಖಿ