ನವದೆಹಲಿ: 2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನವು ಜೂನ್ 1ರಂದು ನಡೆಯಲಿದೆ. ಬಿಹಾರ, ಚಂಡೀಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭೆ ಕ್ಷೇತ್ರಗಳಿಗೆ ಮತದಾನ ಜರುಗಲಿದೆ. ಶುಕ್ರವಾರ ಸಂಜೆಯೇ ಚುನಾವಣಾ ಸಿಬ್ಬಂದಿ ಮತಯಂತ್ರಗಳ ಸಮೇತವಾಗಿ ತಮ್ಮ ಮತಗಟ್ಟೆಗಳತ್ತ ತೆರಳಿದ್ದಾರೆ.
ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ 6 ಹಂತಗಳಲ್ಲಿ 28 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 486 ಲೋಕಸಭೆ ಕ್ಷೇತ್ರಗಳಿಗೆ ಚುನಾವಣಾ ಪೂರ್ಣಗೊಂಡಿದೆ. ಅಂತಿಮ ಹಂತದಲ್ಲಿ 57 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇದರಲ್ಲಿ 41 ಸಾಮಾನ್ಯ, 13 ಎಸ್ಸಿ ಮೀಸಲು ಹಾಗೂ 13 3 ಎಸ್ಟಿ ಮೀಸಲು ಕ್ಷೇತ್ರಗಳಾಗಿವೆ. ಇದೇ ವೇಳೆ, ಒಡಿಶಾ ರಾಜ್ಯ ವಿಧಾನಸಭೆಯ ಉಳಿದ 42 ವಿಧಾನಸಭಾ ಕ್ಷೇತ್ರಗಳಿಗೂ ಏಕಕಾಲದಲ್ಲಿ ಮತದಾನ ಜರುಗಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಕಣದಲ್ಲಿರುವ ಪ್ರಮುಖರು: ಪಂಜಾಬ್‌ನ ಎಲ್ಲ 13 ಕ್ಷೇತ್ರಗಳು, ಹಿಮಾಚಲ ಪ್ರದೇಶದ 4 ಕ್ಷೇತ್ರಗಳು, ಉತ್ತರ ಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9 ಕ್ಷೇತ್ರಗಳು, ಬಿಹಾರದ 8 ಕ್ಷೇತ್ರಗಳು, ಒಡಿಶಾದ 6 ಕ್ಷೇತ್ರಗಳು ಮತ್ತು ಜಾರ್ಖಂಡ್‌ನ 3 ಕ್ಷೇತ್ರಗಳು ಹಾಗೂ ಚಂಡೀಗಢ ಲೋಕಸಭೆ ಕ್ಷೇತ್ರಕ್ಕೆ ಮತದಾನ ನಿಗದಿಯಾಗಿದೆ. ಈ 57 ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ ವಾರಾಣಸಿ ಸಹ ಸೇರಿದೆ. ಒಟ್ಟಾರೆ 904 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಸ್ಪರ್ಧಿಸಿದ್ದಾರೆ. ವಾರಾಣಸಿಯಲ್ಲಿ ಮೋದಿ ವಿರುದ್ಧ ಅಜಯ್ ರಾಯ್ (ಕಾಂಗ್ರೆಸ್), ಅಥರ್ ಜಮಾಲ್ ಲಾರಿ (ಬಿಎಸ್‌ಪಿ), ಕೋಲಿಸೆಟ್ಟಿ ಶಿವಕುಮಾರ್ (ಯುಗ ತುಳಸಿ ಪಕ್ಷ), ಗಗನ್ ಪ್ರಕಾಶ್ ಯಾದವ್, (ಅಪ್ನಾ ದಳ - ಕ್ಯಾಮೆರಾವಾಡಿ) ಮತ್ತು ಪಕ್ಷೇತರರಾಗಿ ದಿನೇಶ್ ಕುಮಾರ್ ಯಾದವ್ ಮತ್ತು ಸಂಜಯ್ ಕುಮಾರ್ ತಿವಾರಿ ಕಣದಲ್ಲಿದ್ದಾರೆ.
ಉಳಿದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಮತ್ತು ನಟಿ ಕಂಗನಾ ರಣಾವತ್, ಪಂಜಾಬ್ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ, ಮೂರು ಬಾರಿ ಸಂಸದರಾಗಿರುವ ಹರ್‌ಸಿಮ್ರತ್ ಕೌರ್ ಬಾದಲ್ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
10.06 ಕೋಟಿ ಮತದಾರರು: ಅಂತಿಮ ಹಂತದ 57 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಂದಾಜು 10.06 ಕೋಟಿ ಮತದಾರರು ತಮ್ಮ ಮತ ಹಚ್ಚು ಚಲಾಯಿಸಲಿದ್ದಾರೆ. ಈ ಪೈಕಿ 5.24 ಕೋಟಿ ಪುರುಷರು, 4.82 ಕೋಟಿ ಮಹಿಳೆಯರು ಮತ್ತು 3,574 ತೃತೀಯಲಿಂಗಿ ಮತದಾರರು ಸೇರಿದ್ದಾರೆ.
ಒಟ್ಟಾರೆ 1.09 ಲಕ್ಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 10.9 ಲಕ್ಷ ಮತಗಟ್ಟೆ ಅಧಿಕಾರಿಗಳು ಮತದಾರರನ್ನು ಸ್ವಾಗತಿಸಲಿದ್ದಾರೆ. ಆಯಾ ಮತಗಟ್ಟೆಗಳಿಗೆ ಯಂತ್ರಗಳು ಮತ್ತು ಮತಯಂತ್ರಗಳೊಂದಿಗೆ ಸಿಬ್ಬಂದಿಯನ್ನು ರವಾನಿಸಲಾಗಿದೆ. ಆರಾಮದಾಯಕ ಮತ್ತು ಸುರಕ್ಷಿತ ವಾತಾವರಣದಲ್ಲಿ ಮತದಾನ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ನೆರಳು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮತದಾನ ಕೇಂದ್ರಗಳಲ್ಲಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅಲ್ಲದೇ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು 64 ಸಾಮಾನ್ಯ ವೀಕ್ಷಕರು, 32 ಪೊಲೀಸ್ ವೀಕ್ಷಕರು, 76 ಖರ್ಚು ವೀಕ್ಷಕರು ಸೇರಿ 172 ವೀಕ್ಷಕರನ್ನು ನೇಮಿಸಲಾಗಿದೆ. ಇವರುಗಳು ಮೊದಲು ಈಗಾಗಲೇ ತಮ್ಮ ಲೋಕಸಭೆ ಕ್ಷೇತ್ರಗಳಿಗೆ ತಲುಪಿದ್ದು, ಆಯೋಗದ ಕಣ್ಣು ಮತ್ತು ಕಿವಿಗಳಾಗಿ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಹೆಚ್ಚುವರಿಯಾಗಿ ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನೂ ನಿಯೋಜಿಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಮತದಾರರಿಗೆ ಯಾವುದೇ ರೀತಿಯ ಆಮಿಷಕ್ಕೆ ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ತಡೆಹಾಕಲು ಸಾಕಷ್ಟು ಕಣ್ಗಾವಲು ಇರಿಸಲಾಗಿದೆ. ಒಟ್ಟು 201 ಅಂತಾರಾಷ್ಟ್ರೀಯ ಗಡಿ ಚೆಕ್ ಪೋಸ್ಟ್‌ಗಳು ಮತ್ತು 906 ಅಂತಾರಾಜ್ಯ ಗಡಿ ಚೆಕ್ ಪೋಸ್ಟ್‌ಗಳಲ್ಲಿ ಯಾವುದೇ ಅಕ್ರಮ ಮದ್ಯ, ಡ್ರಗ್ಸ್, ನಗದು ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. 2,707 ಫ್ಲೈಯಿಂಗ್ ಸ್ಕ್ವಾಡ್‌ಗಳು, 560 ವಿಡಿಯೋ ವೀಕ್ಷಣಾ ತಂಡಗಳ ಸೇರಿ ಹಲವು ತಂಡಗಳು ಚುನಾವಣಾ ಕರ್ತವ್ಯದಲ್ಲಿ ತೊಡಗಿದೆ ಎಂದು ಆಯೋಗ ವಿವರಿಸಿದೆ.
ಇದನ್ನೂ ಓದಿ: ಸಾವರ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣ: ರಾಹುಲ್ ಗಾಂಧಿಗೆ ಸಮನ್ಸ್ ಜಾರಿ