ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ಇಂದು (ಶುಕ್ರವಾರ) ಮತದಾನ ನಡೆದಿದ್ದು, ಶೇ 60.03ರಷ್ಟು ಮತದಾನ ದಾಖಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಆದರೆ ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸಂಜೆ 6 ಗಂಟೆಯ ಬಳಿಕವೂ ಹಲವೆಡೆ ವೋಟ್ ಮಾಡಲು ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಅವರಿಗೂ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. ಹಾಗಾಗಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಯೋಗ ಮಾಹಿತಿ ನೀಡಿದೆ.
"ಎಲ್ಲ ಮತಗಟ್ಟೆಗಳಿಂದ ಮಾಹಿತಿ ಕ್ರೋಢೀಕರಿಸಿದ ನಂತರ ಈ ಸಂಖ್ಯೆ ಏರಿಕೆಯಾಗಬಹುದು. ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶವಿದೆ. ಶನಿವಾರ ಫಾರ್ಮ್ 16ರ ಪರಿಶೀಲನೆಯ ನಂತರ ಅಂತಿಮ ಅಂಕಿಅಂಶ ಸಿಗಲಿದೆ" ಎಂದು ಚು.ಆಯೋಗ ತಿಳಿಸಿದೆ.
102 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ: ಇಂದು ದೇಶದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಿತು. ಚುನಾವಣಾ ಆಯೋಗದ ಪ್ರಕಾರ, ಮೊದಲ ಹಂತದಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ. ಅಷ್ಟೇ ಅಲ್ಲದೇ, ಬಹುತೇಕ ಶಾಂತಿಯುತವಾಗಿ ನಡೆದಿದೆ.
ರಾಜ್ಯಗಳಾದ ಉತ್ತರಾಖಂಡ, ಅರುಣಾಚಲ ಪ್ರದೇಶ. ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗು ಲಕ್ಷದ್ವೀಪದಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ಮುಕ್ತಾಯವಾಗಿದೆ.
ಗಮನ ಸೆಳೆದ ಬಸ್ತಾರ್ ಜನರು: ಇದೇ ಮೊದಲ ಬಾರಿಗೆ ಛತ್ತೀಸ್‌ಗಢದ ನಕ್ಸಲ್‌ಪೀಡಿತ ಬಸ್ತಾರ್ ಎಂಬಲ್ಲಿನ 56 ಹಳ್ಳಿಗಳ ಜನರು ತಮ್ಮ ಗ್ರಾಮಗಳಲ್ಲೇ ನಿರ್ಮಿಸಿದ ಮತಗಟ್ಟೆಗಳಿಗೆ ನಿರ್ಭಿಡೆಯಿಂದ ಆಗಮಿಸಿ ಮತ ಚಲಾಯಿಸಿದರು.
ಅಂಡಮಾನ್ ಬುಡಕಟ್ಟು ಜನರ ಮತೋತ್ಸಾಹ: ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಬುಡಕಟ್ಟು ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಮೊದಲ ಬಾರಿಗೆ ವೋಟ್ ಮಾಡಿದ ಶಾಂಪೆನ್ ಬುಡಕಟ್ಟು ಜನರು!: ಗ್ರೇಟ್ ನಿಕೋಬಾರ್‌ನ ಶಾಂಪೆನ್ ಬುಡಕಟ್ಟು ಸಮುದಾಯದ ಜನರು ಇದೇ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಇತಿಹಾಸ ನಿರ್ಮಿಸಿದರು.
ದೇಶದ ವಿವಿಧೆಡೆ ನೆತ್ತಿ ಸುಡುವ ತಾಪಮಾನದ ನಡುವೆಯೂ ಜನರು ಉತ್ಸಾಹದಿಂದ ಪ್ರಜಾಪ್ರಭುತ್ವದ ಹಬ್ಬ ಮತದಾನದ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಇನ್ನು ಕೆಲವೆಡೆ ಮಳೆ ಸುರಿದರೂ ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತು ಮತದಾನಕ್ಕಾಗಿ ಕಾಯುತ್ತಿದ್ದ ದೃಶ್ಯಗಳೂ ಕಂಡುಬಂದವು.
2019ರ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಶೇ 69.43ರಷ್ಟು ವೋಟಿಂಗ್ ದಾಖಲಾಗಿತ್ತು. ಆ ಸಂದರ್ಭದಲ್ಲಿ 91 ಕ್ಷೇತ್ರಗಳಿದ್ದವು.