ಅಹಮದಾಬಾದ್: 28 ಜನರ ಸಾವಿಗೆ ಕಾರಣವಾದ ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯದಡಿ ಆರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗುಜರಾತ್ ಸರ್ಕಾರ ಸೋಮವಾರ ಅಮಾನತುಗೊಳಿಸಿದೆ. ಇದರಲ್ಲಿ ಓರ್ವ ಎಂಜಿನಿಯರ್, ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಮೂವರು ಪಾಲಿಕೆ ಸಿಬ್ಬಂದಿ ಸೇರಿದ್ದಾರೆ.
ಶನಿವಾರ ಬೆಂಕಿ ಅವಘಡ ಸಂಭವಿಸಿದ ಸ್ಥಳ ಪರಿಶೀಲಿಸಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಮತ್ತು ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೇ ಈ ಬಗ್ಗೆ ಆದಷ್ಟು ಬೇಗ ವರದಿ ಸಲ್ಲಿಸುವಂತೆಯೂ ತನಿಖಾ ತಂಡಕ್ಕೆ ತಿಳಿಸಿದ್ದರು. ಇದಾದ ಒಂದು ದಿನದ ನಂತರ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ. ಅಗತ್ಯ ಅನುಮೋದನೆಗಳಿಲ್ಲದೆ ಗೇಮ್ ಝೋನ್ ಕಾರ್ಯನಿರ್ವಹಿಸಲು ಅನುಮತಿ ನೀಡಿರುವ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಐಪಿಎಸ್ ಅಧಿಕಾರಿ ಸುಭಾಷ್ ತ್ರಿವೇದಿ ಮತ್ತು ಐಎಎಸ್ ಬಂಚನಿಧಿ ಪಾನಿ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವು ರಾಜ್‌ಕೋಟ್ ಮುನ್ಸಿಪಲ್ ಕಮಿಷನರ್ ಮತ್ತು ರಾಜ್‌ಕೋಟ್ ಪೊಲೀಸ್ ಕಮಿಷನರ್ ಅವರನ್ನೂ ವಿಚಾರಣೆಗೊಳಪಡಿಸಿದೆ.
ಅಮಾನತಾದ ಅಧಿಕಾರಿಗಳ ವಿವರ: ರಾಜ್‌ಕೋಟ್ ಸಿಟಿ ಟೌನ್ ಪ್ಲಾನಿಂಗ್ ಶಾಖೆಯ ಸಹಾಯಕ ಟೌನ್ ಪ್ಲಾನರ್ ಗೌತಮ್ ಜೋಶಿ, ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಶನ್ ಟೌನ್ ಪ್ಲಾನಿಂಗ್ ಶಾಖೆಯ ಸಹಾಯಕ ಇಂಜಿನಿಯರ್ ಜೈದೀಪ್ ಚೌಧರಿ, ರಾಜ್‌ಕೋಟ್ ರಸ್ತೆ ನಿರ್ಮಾಣ ಮತ್ತು ವಸತಿ ಇಲಾಖೆಯ ಉಪ ಎಂಜಿನಿಯರ್ ಎಂ.ಆರ್.ಸುಮಾ, ರಾಜ್‌ಕೋಟ್ ರೀಡರ್ ಬ್ರಾಂಚ್ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಆರ್.ಪಟೇಲ್, ಗಾಂಧಿಗ್ರಾಮ್-2 ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಕಣ್ಣು ರಾಥೋಡ್ ಮತ್ತು ರಾಜ್‌ಕೋಟ್ ಡೆಪ್ಯುಟಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಾರಸ್ ಕೊಥಿಯಾ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 4 ಲಕ್ಷ ರೂಪಾಯಿ ಹಾಗು ಕೇಂದ್ರ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ. ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೇಮ್ ಝೋನ್‌ನ ಆರು ಪಾಲುದಾರರು ಮತ್ತು ಇನ್ನೊಬ್ಬ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.