ನಗರಂ (ತೆಲಂಗಾಣ): ಸೂರ್ಯಪೇಟ್ ಜಿಲ್ಲೆಯ ನಗರಂ ಮಂಡಲದ ಫಣಿಗಿರಿಯಲ್ಲಿರುವ ಬೌದ್ಧ ದೇವಾಲಯದಲ್ಲಿ ಉತ್ಖನನದ ವೇಳೆ ಹೆಚ್ಚಿನ ಸಂಖ್ಯೆಯ ಪ್ರಾಚೀನ ಸೀಸದ ನಾಣ್ಯಗಳು ಪತ್ತೆಯಾಗಿವೆ. ರಾಜ್ಯ ಇತಿಹಾಸ ಮತ್ತು ಪರಂಪರೆ ಇಲಾಖೆಯ ನಿರ್ದೇಶಕಿ ಭಾರತಿ ಹೊಳಿಕೇರಿ ಹಾಗೂ ಸೂರ್ಯಪೇಟೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎಸ್. ಲತಾ, ರಾಜ್ಯ ಪುರಾತತ್ವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶೈಲಜಾ ರಾಮಯ್ಯ ಅವರು ಗುರುವಾರ ಈ ಬಗ್ಗೆ ಪರಿಶೀಲನೆ ನಡೆಸಿದರು.
ಸುದ್ದಿಗಾರರಿಗೆ ವಿವರಗಳನ್ನು ಬಹಿರಂಗಪಡಿಸಿದ ರಾಜ್ಯ ಪುರಾತತ್ವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶೈಲಜಾ ರಾಮಯ್ಯರ್, ''ಇತ್ತೀಚೆಗೆ ಬೌದ್ಧ ದೇವಾಲಯದಲ್ಲಿ ಉತ್ಖನನದ ವೇಳೆ ಒಂದು ಮಡಕೆ ಪತ್ತೆಯಾಗಿತ್ತು. ಈ ಮಡಕೆಯಲ್ಲಿ 3,730 ಸೀಸದ ನಾಣ್ಯಗಳು ಇದ್ದವು. ಅದರ ಬಳಿ ಗಾಜಿನ ಮಾದರಿಗಳು, ಮಹಿಳೆಯರು ಧರಿಸಿರುವ ಆಭರಣಗಳ ಮಾದರಿಗಳು ಮತ್ತು ಆ ಕಾಲದಲ್ಲಿ ಮಕ್ಕಳು ಬಳಸುತ್ತಿದ್ದ ಕಾರ್ಟ್ವೀಲ್ ಕಂಡು ಬಂದಿವೆ'' ಎಂದು ತಿಳಿಸಿದರು.
''ಮಡಕೆಯಲ್ಲಿ ದೊರೆತಿರುವ ಸೀಸದ ನಾಣ್ಯಗಳು ಇಕ್ಷ್ವಾಕುಗಳ ಕಾಲಕ್ಕೆ ಸೇರಿದವು ಎಂದು ನಾವು ಕಂಡುಕೊಂಡಿದ್ದೇವೆ. ಒಂದೇ ಕಡೆ ಇಷ್ಟೊಂದು ಪ್ರಮಾಣದ ನಾಣ್ಯಗಳು ಪತ್ತೆಯಾಗಿರುವುದು ದೇಶದಲ್ಲಿ ಇದೇ ಮೊದಲು. ಬೌದ್ಧರ ಇತಿಹಾಸವನ್ನು ತೆರೆದಿಡುವಲ್ಲಿ ಇದೊಂದು ಮಹತ್ತರ ಮೈಲಿಗಲ್ಲು ಆಗಲಿದೆ. ಈ ಬೆಳವಣಿಗೆಯಿಂದ ಫಣಿಗಿರಿ ಗ್ರಾಮ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದಿದೆ'' ಎಂದರು.
ರಾಜ್ಯ ಇತಿಹಾಸ ಮತ್ತು ಪರಂಪರೆ ಇಲಾಖೆಯ ನಿರ್ದೇಶಕಿ ಭಾರತಿ ಹೊಳಿಕೇರಿ ಮಾತನಾಡಿ, ''ನಿಜಾಮರ ಆಳ್ವಿಕೆಯ ಕಾಲದಲ್ಲಿ ಬುದ್ಧ ಕ್ಷೇತ್ರದಲ್ಲಿ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಲಾಗಿದ್ದು, ವಿಶ್ವದ ಹಲವು ದೇಶಗಳ ಪ್ರವಾಸಿಗರ ಗಮನ ಫಣಿಗಿರಿಯ ಮೇಲೆ ಬಿದ್ದಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಸೂರತ್‌ನ ತಾಪಿ ನದಿ ದಡದಲ್ಲಿ ಸಾವಿರಾರು ರಾಜಹಂಸಗಳ ಕಲರವ; ಬಾನಾಡಿಗಳ ವೈಯ್ಯಾರಕ್ಕೆ ಮನಸೋತ ಜನ - Flamingos