ಅಹಮದಾಬಾದ್: ಗುಜರಾತ್ ಮತ್ತು ನೆರೆಯ ರಾಜಸ್ಥಾನದಲ್ಲಿ ಭಾರೀ ಡ್ರಗ್ಸ್ ಅವ್ಯವಹಾರ ಬಯಲಾಗಿದೆ. ನಿಷೇಧಿತ ಮೆಫೆಡ್ರೋನ್ ಡ್ರಗ್ಸ್ ಉತ್ಪಾದನಾ ಘಟಕಗಳ ಮೇಲೆ ಜಂಟಿ ದಾಳಿ ಮಾಡಿದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಭಾರೀ ಪ್ರಮಾಣದ ಅಫೀಮನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ 13 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳಾದ ಅಹಮದಾಬಾದ್ ನಿವಾಸಿ ಮನೋಹರಲಾಲ್ ಎನಾನಿ ಮತ್ತು ರಾಜಸ್ಥಾನದ ಕುಲದೀಪ್ ಸಿಂಗ್ ರಾಜಪುರೋಹಿತ್ ಅವರು ಮೆಫೆಡ್ರೋನ್ ತಯಾರಿಕಾ ಘಟಕಗಳನ್ನು ಸ್ಥಾಪಿಸಿದ್ದಾರೆ ಎಂದು ಎಟಿಎಸ್‌ಗೆ ಸುಳಿವು ದೊರೆತ ನಂತರ, ಭಯೋತ್ಪಾದನಾ ನಿಗ್ರಹ ದಳ ಮತ್ತು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ವೇಳೆ 230 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ಡ್ರಗ್ಸ್ ಕೇಸಲ್ಲಿ ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳಾದ ಎನಾನಿ, ರಾಜಪುರೋಹಿತ್ ಹಾಗೂ ಅವರ ಸಹಚರರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ರಾಜಸ್ಥಾನದ ಸಿರೋಹಿ ಮತ್ತು ಜೋಧ್‌ಪುರ, ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಪಿಪ್ಲಾಜ್ ಮತ್ತು ಭಕ್ತಿನಗರ ಕೈಗಾರಿಕಾ ಪ್ರದೇಶಗಳಲ್ಲಿ ಮಾದಕವಸ್ತುವನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ನಾಲ್ಕೂ ಘಟಕಗಳ ಮೇಲೆ ದಾಳಿ ದಾಳಿ ನಡೆಸಲಾಗಿದೆ.
22 ಕೆಜಿ ಡ್ರಗ್ಸ್ ವಶ: ಎಟಿಎಸ್ ಪ್ರಕಾರ, 22 ಕೆಜಿಯಷ್ಟು ಘನ ರೂಪದ ಮೆಫೆಡ್ರೋನ್ ಮತ್ತು 124 ಕೆಜಿಯಷ್ಟು ದ್ರವ ರೂಪದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಇದು 230 ಕೋಟಿ ರೂ. ಮೌಲ್ಯದ್ದಾಗಿದೆ. ಆರೋಪಿಗಳಾದ ರಾಜಪುರೋಹಿತ್ ಅವರನ್ನು ಗಾಂಧಿನಗರದಲ್ಲಿ ಮತ್ತು ಎನಾನಿಯನ್ನು ಸಿರೋಹಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದೆ.
ರಾಜಸ್ಥಾನದ ಕೈಗಾರಿಕಾ ಘಟಕದಲ್ಲಿ ಮೆಫೆಡ್ರೋನ್ ಉತ್ಪಾದನೆಯಲ್ಲಿ ತೊಡಗಿದ್ದಕ್ಕಾಗಿ 2015 ರಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ನಿಂದ ಆರೋಪಿ ಮನೋಹರ್ಲಾಲ್ ಎನಾನಿಯನ್ನು ಬಂಧಿಸಲಾಗಿತ್ತು. ಆಗ ಅವರಿಗೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಬಂಧಿತ ಎಲ್ಲಾ ಆರೋಪಿಗಳು ಪರಸ್ಪರ ಸಂಪರ್ಕ ಹೊಂದಿದ್ದು, ವಲ್ಸಾದ್ ಜಿಲ್ಲೆಯ ವಾಪಿ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಯಿಂದ ಕಚ್ಚಾ ವಸ್ತುಗಳನ್ನು ಖರೀದಿಸುತ್ತಿದ್ದರು. ಡ್ರಗ್ಸ್ ಅನ್ನು ಯಾವಾಗ ಉತ್ಪಾದಿಸುತ್ತಿದ್ದರು, ಅದನ್ನು ಹಿಂದೆ ಮಾರಾಟ ಮಾಡಲಾಗಿದೆ, ಇದರಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತಾಯಿಯ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿ ಮಗಳ ನಗ್ನ ಫೋಟೋ ಪಡೆದ ವಂಚಕ: ಬೆಂಗಳೂರಲ್ಲಿ ಯುವತಿ ದೂರು - Blackmail Case