ಭೋಪಾಲ್ (ಮಧ್ಯಪ್ರದೇಶ): ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಮಧ್ಯಪ್ರದೇಶ ಸರ್ಕಾರ 'ಸಿಎಂ ರೈಸ್' ಹೆಸರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳ ಶಾಲೆಗಳನ್ನು ಆರಂಭಿಸುತ್ತಿದೆ. ಆದರೆ, ರಾಜ್ಯದ ಇತ್ತೀಚೆಗಿನ ಶೈಕ್ಷಣಿಕ ಅಂಕಿ - ಅಂಶಗಳು ಬೇರೆಯದ್ದೇ ಕತೆ ಹೇಳುತ್ತವೆ. 2024-25ರ ಸಾಲಿನಲ್ಲಿ 23 ಲಕ್ಷಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ದೂರವಾಗಿದ್ದಾರೆ. 5,500 ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವ ಸಾಧ್ಯತೆ ಇದೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ.
ಖಾಸಗಿ ಶಾಲೆಗಳಂತೆ ಹೊಸದಾಗಿ ಆರಂಭಿಸಲಾಗುತ್ತಿರುವ ಸಿಎಂ ರೈಸ್ ಶಾಲೆಗಳಿಗೆ ಮಕ್ಕಳ ದಾಖಲಾಗುತ್ತಿದ್ದರೆ, ಒಂದೇ ಒಂದು ಮಗು ಪ್ರವೇಶ ಪಡೆಯದ ಅನೇಕ ಸರ್ಕಾರಿ ಶಾಲೆಗಳು ರಾಜ್ಯದಲ್ಲಿವೆ. ಇದೇ ವೇಳೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರಯತ್ನದ ಹೊರತಾಗಿಯೂ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿರುವುದು ಅಂಕಿ- ಅಂಶಗಳಲ್ಲಿದೆ.
ಹೀಗಿದೆ ಸರ್ಕಾರಿ ಶಾಲೆಗಳ ದುಃಸ್ಥಿತಿ: 2024-25ರ ಶೈಕ್ಷಣಿಕ ಅವಧಿಯಲ್ಲಿ 5,500 ಸರ್ಕಾರಿ ಶಾಲೆಗಳು ಒಂದನೇ ತರಗತಿಗೆ ಪ್ರವೇಶ ಪಡೆದಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ವಾರ್ಷಿಕ ಅಂಕಿ ಅಂಶ ಹೇಳುತ್ತದೆ. ಅಂದರೆ ಈ ಶಾಲೆಗಳಲ್ಲಿ ಈಗ ಒಂದನೇ ತರಗತಿಯನ್ನು ಶೂನ್ಯ ವರ್ಷ ಎಂದು ಘೋಷಿಸಲಾಗುತ್ತಿದೆ. ಸುಮಾರು 25 ಸಾವಿರ ಶಾಲೆಗಳಲ್ಲಿ ಕೇವಲ 1-2 ಮಕ್ಕಳು ಮಾತ್ರ ದಾಖಲಾತಿ ಪಡೆದಿದ್ದಾರೆ. 11,345 ಶಾಲೆಗಳಲ್ಲಿ ಕೇವಲ 10 ದಾಖಲಾತಿಗಳು ನಡೆದಿವೆ. ಅದೇ ರೀತಿ, ಸುಮಾರು 23 ಸಾವಿರ ಶಾಲೆಗಳಲ್ಲಿ 3 ರಿಂದ 5 ಮಕ್ಕಳು ಮಾತ್ರ ಪ್ರವೇಶ ಪಡೆದಿದ್ದಾರೆ. ಮುಂದಿನ ಶೈಕ್ಷಣಿಕ ಅವಧಿಯಲ್ಲೂ ಇದೇ ಸ್ಥಿತಿ ಮುಂದುವರಿದರೆ ರಾಜ್ಯದ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚುವುದು ಮಾತ್ರ ಶತಸಿದ್ಧ.
ಆತಂಕದಲ್ಲಿ ಶಿಕ್ಷಣ ಇಲಾಖೆ: 2023-24ರ ಶೈಕ್ಷಣಿಕ ಅವಧಿಯಲ್ಲಿ 1 ರಿಂದ 12 ನೇ ತರಗತಿ ಪೂರ್ಣಗೊಳಿಸಿದ 23 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮುಂದಿನ ಹಂತದ ಶಿಕ್ಷಣಕ್ಕೆ ದಾಖಲಾಗಿಲ್ಲ. ಈ ವಿದ್ಯಾರ್ಥಿಗಳು ಬೇರೆ ಯಾವುದೇ ಶಾಲೆಯಲ್ಲಿ ಪ್ರವೇಶ ಪಡೆದಿಲ್ಲ. ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುತ್ತಿರುವುದು ಶಿಕ್ಷಣ ಇಲಾಖೆಗೆ ತೀವ್ರ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆಸುವುದು ಹೇಗೆ ಎಂದು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಸರ್ಕಾರಿ ಶಾಲೆ ಬಿಡಲು ಇದೇ ಕಾರಣ: ವಾಸ್ತವ ಸಂಗತಿಯೆಂದರೆ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರ ಕೊರತೆಯಿದೆ. ಈ ವರ್ಷ 80 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಅವರಿಗೆ ಮಕ್ಕಳಿಗೆ ಕಲಿಸುವಷ್ಟು ಅನುಭವವಿಲ್ಲ ಅಥವಾ ಇಲಾಖಾ ತರಬೇತಿಯನ್ನೂ ನೀಡಲಾಗಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಕಲಿಸಲು ಬಯಸಿದ್ದಾರೆ. ಆದರೆ, ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಕರೇ ಇಲ್ಲ. ಮಧ್ಯಾಹ್ನದ ಊಟ, ಉಚಿತ ಸಮವಸ್ತ್ರ, ಪುಸ್ತಕ ವಿತರಣೆಯು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿಲ್ಲ. ಅಚ್ಚರಿಯ ಸಂಗತಿ ಎಂದರೆ, ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.
23 ಲಕ್ಷಕ್ಕೂ ಹೆಚ್ಚು ಮಕ್ಕಳು ನಾಪತ್ತೆ: ಶಾಲಾ ಶಿಕ್ಷಣ ಇಲಾಖೆಯ ಅಂಕಿ - ಅಂಶಗಳ ಪ್ರಕಾರ, 2023-24 ನೇ ಸಾಲಿನಲ್ಲಿ ನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ, 2024-25 ನೇ ಸಾಲಿನಲ್ಲಿ 1,14,10,911 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದು ಕಳೆದ ವರ್ಷಕ್ಕಿಂತ 23,73,458 ಕಡಿಮೆಯಾಗಿದೆ. ಅಂದರೆ 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅಂತಹ ವಿದ್ಯಾರ್ಥಿಗಳ ಪತ್ತೆಗೆ ಇಲಾಖೆಯು ಶಿಕ್ಷಕರನ್ನು ನಿಯೋಜಿಸಿದೆ. ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಮತ್ತೆ ದಾಖಲಿಸುವ, ವಿದ್ಯಾರ್ಥಿಗಳ ಮ್ಯಾಪಿಂಗ್ ಮಾಡಲು ಸೂಚಿಸಲಾಗಿದೆ.
ಇದನ್ನೂ ಓದಿ: ಮಗು ರಕ್ಷಿಸಲು ಹೋಗಿ ನಾಲ್ವರು ಕಾರ್ಮಿಕರು ಕಾಲುವೆ ನೀರಿನಲ್ಲಿ ಮುಳುಗಿ ಸಾವು