ನವದೆಹಲಿ: ಚುನಾವಣಾ ಬಾಂಡ್‌ಗಳ ಕುರಿತ ಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಪೂರ್ಣ ಮಾಹಿತಿ ನೀಡಲಾಗಿದೆ. ಈವರೆಗೂ 22,217 ಬಾಂಡ್‌ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳು 22,030 ಬಾಂಡ್‌ಗಳನ್ನು ಎನ್ಕ್ಯಾಶ್ ಮಾಡಿಕೊಂಡಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸುಪ್ರೀಂಕೋರ್ಟ್ಗೆ ಬುಧವಾರ ಅಫಿಡವಿಟ್ ಸಲ್ಲಿಸಿದೆ.
ಪ್ರತಿ ಚುನಾವಣಾ ಬಾಂಡ್‌ನ ಖರೀದಿ ದಿನಾಂಕ, ಖರೀದಿಸಿದವರ ಹೆಸರು, ಬಾಂಡ್‌ನ ಮುಖಬೆಲೆ, ಯಾವ ಪಕ್ಷಕ್ಕೆ ದೇಣಿಗೆ, ಬಾಂಡ್ ನಗದೀಕರಿಸಿದ್ದು ಸೇರಿದಂತೆ ಎಲ್ಲ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥ ದಿನೇಶ್ಕುಮಾರ್ ಖಾರಾ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಯಾವಾಗ ಎಷ್ಟು ಬಾಂಡ್ ಖರೀದಿ, ಎನ್ಕ್ಯಾಶ್: 2019ರ ಏಪ್ರಿಲ್ 12 ರಿಂದ 2024ರ ಫೆಬ್ರವರಿ 15 ರೊಳಗೆ ಖರೀದಿಸಿದ ಮತ್ತು ಎನ್ಕ್ಯಾಶ್ ಮಾಡಿದ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಡೇಟಾವನ್ನು ಡಿಜಿಟಲ್ ರೂಪದಲ್ಲಿ ಒದಗಿಸಲಾಗಿದೆ. ಏಪ್ರಿಲ್ 01, 2019 ರಿಂದ ಫೆಬ್ರವರಿ 15, 2024 ರ ಅವಧಿಯಲ್ಲಿ 22,217 ಬಾಂಡ್‌ಗಳನ್ನು ಖರೀದಿ ಮಾಡಲಾಗಿದೆ. ಅದರಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 11 ರ ನಡುವೆ ಖರೀದಿಸಿದ ಒಟ್ಟು ಬಾಂಡ್‌ಗಳ ಸಂಖ್ಯೆ 3346. ಅದರಲ್ಲಿ 1609 ಎನ್ಕ್ಯಾಶ್ ಮಾಡಲಾಗಿದೆ. 2019ರ ಏಪ್ರಿಲ್ 12 ರಿಂದ ಫೆಬ್ರವರಿ 15, 2024 ರ ನಡುವೆ 18871 ಬಾಂಡ್‌ಗಳನ್ನು ಖರೀದಿಸಿದರೆ, 20,421 ಎನ್ಕ್ಯಾಶ್ ಮಾಡಲಾಗಿದೆ ಎಂದು ಅಫಿಡವಿಟ್ನಲ್ಲಿ ನಮೂದಿಸಲಾಗಿದೆ.
ಯೋಜನೆ ಜಾರಿಗೆ ಬಂದ ಬಳಿಕ ಅಂದರೆ, ಏಪ್ರಿಲ್ 1, 2019 ಮತ್ತು ಫೆಬ್ರವರಿ 15, 2024 ರ ನಡುವಿನ 5 ವರ್ಷಗಳ ಅವಧಿಯಲ್ಲಿ ಒಟ್ಟು 22,217 ಬಾಂಡ್‌ಗಳನ್ನು ಖರೀದಿಸಲಾಗಿದೆ ಈ ಪೈಕಿ ಒಟ್ಟು 22,030 ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ಅದವುಗಳನ್ನು ಎನ್ಕ್ಯಾಶ್ ಮಾಡಿಕೊಂಡಿವೆ. ಜೊತೆಗೆ ನಿಗದಿತ 15 ದಿನಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಎನ್ಕ್ಯಾಶ್ ಮಾಡಿಕೊಳ್ಳದ ಚುನಾವಣಾ ಬಾಂಡ್‌ಗಳನ್ನು ಜನವರಿ 2, 2018 ರ ಗೆಜೆಟ್ ಅಧಿಸೂಚನೆಯ ಪ್ರಕಾರ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.
ಸುಪ್ರೀಂ 'ಬಾಂಡ್' ಆದೇಶ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದು ಮಾಡಿದ ಸುಪ್ರೀಂಕೋರ್ಟ್, ಮಾರ್ಚ್ 11 ರಂದು ಎಲ್ಲ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಸೂಚಿಸಿತ್ತು. ಆದರೆ, ಇದಕ್ಕಾಗಿ ಎಸ್‌ಬಿಐ 6 ತಿಂಗಳ ಕಾಲಾವಕಾಶ ಕೋರಿತ್ತು. ಈ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ, ಮಾರ್ಚ್ 12 ರ ಸಂಜೆಯೊಳಗೆ ಪೂರ್ಣ ಮಾಹಿತಿ ನೀಡಲೇಬೇಕು ಎಂದು ಆದೇಶಿಸಿತ್ತು. ಅಲ್ಲದೇ, ಚುನಾವಣಾ ಆಯೋಗ ಪಡೆದ ಮಾಹಿತಿಯನ್ನು ಮಾರ್ಚ್ 15 ರೊಳಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆಯೂ ತಾಕೀತು ಮಾಡಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗಕ್ಕೆ ಜೂನ್ 30ರವರೆಗೆ ಸಮಯಾವಕಾಶ ಕೋರಿದ ಎಸ್‌ಬಿಐ