ಬೊಕಾಖಾಟ್(ಅಸ್ಸಾಂ): ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಈ ವರ್ಷದ ಮೊದಲ ಪ್ರವಾಹಕ್ಕೆ 10 ಘೇಂಡಾಮೃಗಗಳು ಸೇರಿದಂತೆ 212 ವನ್ಯಜೀವಿಗಳು ಸಾವನ್ನಪ್ಪಿವೆ. ಉದ್ಯಾನದಲ್ಲಿ ಪ್ರವಾಹದ ಅಧಿಕವಾಗಿದ್ದರಿಂದ ಅನೇಕ ಪ್ರಾಣಿಗಳು ಮೃತಪಟ್ಟಿವೆ.
ಉದ್ಯಾನದ ಪ್ರಸ್ತುತ ಪರಿಸ್ಥಿತಿ ಕುರಿತು ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಫೀಲ್ಡ್ ಡೈರೆಕ್ಟರ್ ಡಾ. ಸೋನಾಲಿ ಘೋಸ್ ಮಾಹಿತಿ ನೀಡಿದ್ದಾರೆ. ಅವರ ಮಾಹಿತಿ ಪ್ರಕಾರ 'ಕಾಜಿರಂಗ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದ 233 ಅರಣ್ಯ ಶಿಬಿರಗಳಲ್ಲಿ ಒಟ್ಟು 26 ಕ್ಯಾಂಪ್ಸ್ಗಳು ಇನ್ನೂ ಪ್ರವಾಹದ ನೀರಿನಲ್ಲಿವೆ. ಅಗರತೋಲಿಯ 34 ಕ್ಯಾಂಪ್‌ಗಳಲ್ಲಿ ಎರಡು ಜಲಾವೃತವಾಗಿದ್ದರೆ, ಕಾಜಿರಂಗದಲ್ಲಿನ 58 ಶಿಬಿರಗಳ ಪೈಕಿ 15 ಮತ್ತು ಬಗ್ರಿಯಲ್ಲಿನ 39 ಶಿಬಿರಗಳ ಪೈಕಿ 9 ಶಿಬಿರಗಳು ಪ್ರವಾಹದಲ್ಲಿ ಸಿಲುಕಿವೆ. ಈ ಪ್ರದೇಶಗಳಲ್ಲಿ ಐದು ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗಿದೆ. ನಿಧಾನವಾಗಿ ಪ್ರವಾಹ ಇಳಿಮುಖವಾಗುತ್ತಿರುವುದರಿಂದ ಅರಣ್ಯ ಸಿಬ್ಬಂದಿ ಈಗಾಗಲೇ ತಮ್ಮ ಶಿಬಿರಗಳಿಗೆ ಮರಳಿದ್ದಾರೆ'.
ಭೀಕರ ಪ್ರವಾಹದಿಂದಾಗಿ ವಿವಿಧ ಪ್ರಭೇದದ ವನ್ಯಜೀವಿಗಳು ಉದ್ಯಾನದ ಒಳಗಿನ ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿವೆ. ಆದರೆ, ಇನ್ನೂ ಕೆಲವು ಪ್ರಾಣಿಗಳು ಆಹಾರ ಮತ್ತು ನೆಲೆಗಾಗಿ ಉದ್ಯಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ದಕ್ಷಿಣ ಕರ್ಬಿ ಬೆಟ್ಟಗಳಲ್ಲಿ ಆಶ್ರಯ ಪಡೆದಿವೆ. ಪ್ರವಾಹದ ಮಧ್ಯೆಯೂ ಅರಣ್ಯ ಇಲಾಖೆ ಜತೆಗೆ ಸ್ಥಳೀಯರು, ರಕ್ಷಣಾ ಸಂಸ್ಥೆಗಳು ವನ್ಯಜೀವಿಗಳನ್ನು ರಕ್ಷಿಸುತ್ತಿದ್ದಾರೆ. ಇನ್ನು ಉದ್ಯಾನದ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ-37 ಅನ್ನು ದಾಟುವಾಗ ಪ್ರವಾಹದಲ್ಲಿ ಸಿಕ್ಕಿ ಅಥವಾ ಗಾಯಗೊಂಡ ಅನೇಕ ಪ್ರಾಣಿಗಳು ಪತ್ತೆಯಾಗುತ್ತಿವೆ.
ಹಾಗೇ, ಪ್ರವಾಹದ ಪರಿಣಾಮ 2 ಆನೆ ಮರಿಗಳು ಮತ್ತು ಎರಡು ಘೇಂಡಾಮೃಗಗಳು ಸೇರಿದಂತೆ 143 ವನ್ಯಜೀವಿ ಪ್ರಾಣಿಗಳು ತಾಯಿಯಿಂದ ಬೇರ್ಪಟ್ಟಿದ್ದು, ಅವುಗಳನ್ನು ರಕ್ಷಿಸಲಾಗಿದೆ. 123 ವನ್ಯಜೀವಿ ಪ್ರಾಣಿಗಳನ್ನು ಈಗಾಗಲೇ ಅರಣ್ಯ ಪಶುವೈದ್ಯರು ಚಿಕಿತ್ಸೆ ನೀಡಿದ್ದು ಬಿಡುಗಡೆ ಮಾಡಿದ್ದಾರೆ.
ರಾಜ್ಯದಲ್ಲಿ ಜನರ ಸಾವಿನ ಸಂಖ್ಯೆ 93ಕ್ಕೆ ಏರಿಕೆ: ರಾಜ್ಯದಲ್ಲಿ ಒಟ್ಟಾರೆ ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದರೂ ಇನ್ನೂ ಕೆಲವು ಗ್ರಾಮಗಳು ಜಲಾವೃತಗೊಂಡಿವೆ. ಇಂದಿನ ವರದಿ ಪ್ರಕಾರ ಸದ್ಯ ಸಾವಿನ ಸಂಖ್ಯೆ 93ಕ್ಕೆ ಏರಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ ರಾಜ್ಯಾದ್ಯಂತ 18 ಜಿಲ್ಲೆಗಳು ಇನ್ನೂ ಪ್ರವಾಹದಿಂದ ತತ್ತರಿಸಿವೆ. 1342 ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಒಟ್ಟು 91 ಸಾವು ವರದಿಯಾಗಿತ್ತು, ಆದರೆ, ಪ್ರವಾಹಕ್ಕೆ ಮತ್ತೆ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 93 ಕ್ಕೆ ಏರಿಕೆಯಾಗಿದೆ.
ಪ್ರವಾಹದ ಪರಿಣಾಮ 1,342 ಗ್ರಾಮಗಳ 5.97 ಲಕ್ಷ ಜನರು ತೊಂದರೆಗೀಡಾಗಿದ್ದರೆ ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಗಿದೆ. ಪ್ರವಾಹ ಪೀಡಿತ ನಿವಾಸಿಗಳು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಒಂದೆಡೆ ಪ್ರವಾಹ ಅಬ್ಬರಿಸುತ್ತಿದ್ದರೆ ಇನ್ನೊಂದೆಡೆ ಪ್ರವಾಹದಿಂದ ವಿವಿಧ ಸಾಂಕ್ರಾಮಿಕ ರೋಗಗಳು ಉಲ್ಬಣಿಸಲು ಆರಂಭಿಸಿದೆ. ಹಲವೆಡೆ ಹದಗೆಟ್ಟ ರಸ್ತೆ, ಸೇತುವೆಗಳಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಕೆಲವು ನದಿಗಳ ನೀರಿನ ಮಟ್ಟಗಳು ಕಡಿಮೆಯಾಗುತ್ತಿದ್ದರೆ. ಕೆಲವು ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿವೆ.
ಇದನ್ನೂ ಓದಿ: ಮೇಘಾಲಯದಲ್ಲಿ ಶೇ 44ರಷ್ಟು ಹೆಚ್ಚು ಮಳೆ: ಅಸ್ಸಾಂ ಪ್ರವಾಹದಲ್ಲಿ ಸಾವಿನ ಸಂಖ್ಯೆ 52ಕ್ಕೇರಿಕೆ - ASSAM FLOODS DEATH TOLL