ನವದೆಹಲಿ: ರೈತರು ಹಾಗೂ ಕೇಂದ್ರ ಸರ್ಕಾರದ ನಡುವಿನ ಮಾತುಕತೆ ವೈಫಲ್ಯದಿಂದ ರೈತ ಸಂಘಟನೆಗಳ ದೆಹಲಿ ಚಲೋ ಹೋರಾಟ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಗಡಿಗಳಲ್ಲಿ ಹಾಕಿರುವ ಬ್ಯಾರಿಕೇಡ್ ಒಡೆಯಲು ಜೆಸಿಬಿ ಮತ್ತು ಪೊಕ್ಲೆನ್ ಯಂತ್ರಗಳನ್ನು ಜಮಾವಣೆ ಮಾಡಲಾಗಿದೆ. 14 ಸಾವಿರಕ್ಕೂ ಅಧಿಕ ಜನರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಭಾರೀ ಶಸ್ತ್ರಾಸ್ತ್ರಗಳೂ ಪಂಜಾಬ್- ಹರಿಯಾಣ ಗಡಿಗಳಲ್ಲಿ ರೈತರು ಸನ್ನದ್ಧವಾಗಿ ಇಟ್ಟಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ಸುಮಾರು 14 ಸಾವಿರ ಜನರು, 1,200 ಟ್ರ್ಯಾಕ್ಟರ್- ಟ್ರಾಲಿಗಳು, 300 ಕಾರುಗಳು, 10 ಮಿನಿ ಬಸ್‌ಗಳು ಮತ್ತು ಸಣ್ಣ ಸಣ್ಣ ವಾಹನಗಳು, ಪೋಕ್ಲೆನ್ ಮತ್ತು ಜೆಸಿಬಿ ಯಂತ್ರಗಳನ್ನು ಜಮಾವಣೆ ಮಾಡಲಾಗಿದೆ ಎಂದು ಗುಪ್ತಚರ ಮಾಹಿತಿ ಬಂದಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸಲು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಶಂಭು ಗಡಿಯಲ್ಲಿ ರೈತರ ಸೋಗಿನಲ್ಲಿ ಇತರ ಜನರು ಜಮಾವಣೆ ಆಗಿದ್ದಾರೆ. ಯಾವುದೇ ಕ್ಷಣದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ. ಭಾರೀ ಯಂತ್ರೋಪಕರಣಗಳ ಜೊತೆಗೆ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗುವ ಮೊದಲು ಜನರು ಒಂದೆಡೆ ಗುಂಪು ಸೇರುವುದನ್ನು ತಡೆಯಿರಿ ಎಂದು ತಾಕೀತು ಮಾಡಿದೆ.
ರೈತರ ಹೋರಾಟದಲ್ಲಿ ಇತರ ಸಂಘಟನೆಗಳು ಸೇರಿಕೊಂಡಿವೆ. ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷ ನಡೆಸಲು ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ. ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ಶಸ್ತ್ರಾಸ್ತ್ರ ಸಮೇತ ಜನರು ಸಜ್ಜಾಗಿದ್ದಾರೆ ಎಂದು ಗುಪ್ತಚರ ದಳಗಳು ಕೇಂದ್ರ ಸರ್ಕಾರ ಮಾಹಿತಿ ನೀಡಿದ ಹಿನ್ನೆಲೆ ಪಂಜಾಬ್ ಸರ್ಕಾರಕ್ಕೆ ಈ ಸೂಚನೆ ನೀಡಲಾಗಿದೆ.
ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ಟ್ರಾಲಿ ಬಳಸುವಂತಿಲ್ಲ: ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ಗಳ ಟ್ರಾಲಿಗಳನ್ನು ಬಳಸುವಂತಿಲ್ಲ ಎಂದು ಪಂಜಾಬ್ ಹೈಕೋರ್ಟ್ ಹೇಳಿದೆ. ರೈತರು ಭಾರೀ ಸಂಖ್ಯೆಯಲ್ಲಿ ಟ್ರಾಲಿಗಳನ್ನು ಹೆದ್ದಾರಿಗಳಿಗೆ ತಂದಿದ್ದಾರೆ. ಇದು ಮೋಟಾರು ವಾಹನ ಕಾಯ್ದೆಯ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ. ಇದಲ್ಲದೇ, ರೈತರು ನಡೆಸುವ ಹೋರಾಟದಲ್ಲಿ 500 ಟ್ರ್ಯಾಕ್ಟರ್ ಮತ್ತು 4500 ಜನರು ಮಾತ್ರ ಒಂದೆಡೆ ಸೇರಲು ಪಂಜಾಬ್ ಸರ್ಕಾರ ಅನುಮತಿ ನೀಡಿದೆ.
ರೈತರಿಗೆ ಯಂತ್ರ ನೀಡಬೇಡಿ: ಹರಿಯಾಣ- ಪಂಜಾಬ್ ಗಡಿಗಳಿಗೆ ಭಾರೀ ಯಂತ್ರಗಳೊಂದಿಗೆ ರೈತರು ದಾಂಗುಡಿ ಇಡುತ್ತಿರುವುದು ಆತಂಕ ಉಂಟು ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಡುವ ಲಕ್ಷಣಗಳಿದ್ದು, ರೈತರಿಗೆ ಭಾರೀ ಯಂತ್ರಗಳನ್ನು ನೀಡುವುದನ್ನು ತಡೆಯಿರಿ ಎಂದು ಹರಿಯಾಣ ಡಿಜಿಪಿ ಪಂಜಾಬ್ ಡಿಜಿಪಿಗೆ ಪತ್ರ ಬರೆದಿದ್ದಾರೆ.
ಗಡಿಗಳಿಗೆ ರೈತರು ದೊಡ್ಡ ಯಂತ್ರಗಳೊಂದಿಗೆ ಧಾವಿಸುತ್ತಿದ್ದಾರೆ. ಪೋಕ್ಲೆನ್ ಮತ್ತು ಜೆಸಿಬಿ ಯಂತ್ರಗಳ ಬಳಕೆಯಿಂದ ಗಡಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಜೀವಕ್ಕೂ ಅಪಾಯವಿದೆ. ಇಂತಹ ಯಂತ್ರಗಳನ್ನು ರೈತರಿಗೆ ನೀಡುವುದನ್ನು ತಪ್ಪಿಸಿ ಎಂದು ಹರಿಯಾಣದ ಡಿಜಿಪಿ ಕೋರಿದ್ದಾರೆ.
ಧರಣಿ ಸ್ಥಳದಿಂದ ದೂರವಿರಿ: ಜೊತೆಗೆ ಜನರು, ಮಾಧ್ಯಮಗಳಿಗೂ ಎಚ್ಚರಿಕೆ ನೀಡಿರುವ ಹರಿಯಾಣ ಡಿಜಿಪಿ ಶತ್ರುಜಿತ್ ಕಪೂರ್ ಅವರು, ಹೋರಾಟ ಸ್ಥಳದಿಂದ 1 ಕಿ.ಮೀ ದೂರ ಅಂತರ ಕಾಯ್ದುಕೊಳ್ಳಿ. ಮಾಧ್ಯಮಗಳು 1 ಕಿ.ಮೀ ದೂರದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲಿಂದಲೇ ವರದಿ ಮಾಡಿ. ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಶಂಭು ಗಡಿಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿದ್ದರು. ಅದರ ಆಧಾರದ ಮೇಲೆ ಡಿಜಿಪಿ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಸರ್ಕಾರದ ಎಂಎಸ್ಪಿ ಪ್ರಸ್ತಾಪ ತಿರಸ್ಕರಿಸಿದ ರೈತರು: 21 ರಂದು ದಿಲ್ಲಿ ಚಲೋ ಹೋರಾಟ