ಆಡಿಯೋ Viral ವಿಚಾರ: ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ನಳಿನ್ ಕುಮಾರ್ ಕಟೀಲ್ ಭೇಟಿ, ಪರಿಶೀಲನೆ - ಮಂಗಳೂರು ವೆನ್ಲಾಕ್ ಆಸ್ಪತ್ರೆ ಸುದ್ದಿ
🎬 Watch Now: Feature Video
ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿನ್ನೆ ಸಂಜೆ ವೇಳೆಗೆ ಇಬ್ಬರು ಮಹಿಳೆಯರು ತುಳುವಿನಲ್ಲಿ ಮಾತನಾಡುವ ಆಡಿಯೋದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದ ರೋಗಿಯನ್ನು ಪ್ರತ್ಯೇಕವಾಗಿ ಇಡದೆ ಅಸಡ್ಡೆ ತೋರಲಾಗಿದ್ದು, ಇದರಿಂದ ಕೊರೊನಾ ಇತರರಿಗೂ ಹರಡುವ ಸಾಧ್ಯತೆ ಇದೆ ಎಂದು ಮಾತನಾಡಿಕೊಳ್ಳಲಾಗಿತ್ತು. ಈ ಆಡಿಯೋ ವೈರಲ್ ಆಗಿ ಜನರು ಭಯಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯಲ್ಲಿದ್ದ ಸಂಸದ, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿದರು. ಅವರು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಅಧೀಕ್ಷಕಿ ಸಹಿತ ವಿವಿಧ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿದರು. ಸಂಸದರಿಗೆ ಮಾಹಿತಿ ನೀಡಿದ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಕೊರೊನಾ ಚಿಕಿತ್ಸೆಗಾಗಿ ಪ್ರತ್ಯೇಕ ಬ್ಲಾಕ್ ವ್ಯವಸ್ಥೆ ಮಾಡಿರುವುದನ್ನು ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದರು. ಒಬ್ಬ ವ್ಯಕ್ತಿಯಲ್ಲಿ ಮಾತ್ರ ಪಾಸಿಟಿವ್ ಪತ್ತೆಯಾಗಿದ್ದು, ಇನ್ನೊಬ್ಬ ಕೊರೊನಾ ಶಂಕಿತ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಸುಮಾರು 200 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇಡುವ ವ್ಯವಸ್ಥೆ ಇದೆ. ಆದ್ದರಿಂದ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಮಾಹಿತಿ ನೀಡಿದರು.