ಉದ್ಯೋಗದ ಆಸೆ ಹೊತ್ತು ಏಜೆಂಟರ್ ಮೂಲಕ ಕುವೈತ್‌ಗೆ ಪ್ರಯಾಣ: ನರಕಯಾತನೆ ಬಳಿಕ ತಾಯ್ನಾಡಿಗೆ ಬಂದ ಯುವಕರು - Vijayapura Youths
🎬 Watch Now: Feature Video
Published : Sep 6, 2023, 7:00 PM IST
ವಿಜಯಪುರ: ಉದ್ಯೋಗ ಹಾಗೂ ಐಷಾರಾಮಿ ಜೀವನ ನಂಬಿ ಏಜೆಂಟರ್ಗಳ ಮೂಲಕ ಕುವೈತ್‌ಗೆ ತೆರಳಿದ್ದ ದ್ರಾಕ್ಷಿ ನಾಡಿನ ಇಬ್ಬರು ಯುವಕರು, ಹಲವು ದಿನಗಳ ಕಾಲ ಅಲ್ಲಿನ ನರಕಯಾತನೆ ಕಂಡ ಬಳಿಕ ಮತ್ತೆ ಸುರಕ್ಷತವಾಗಿ ತಾಯ್ನಾಡಿಗೆ ಬಂದಿರುವುದಾಗಿ ಬಿಜೆಪಿ ಮುಖಂಡ ಉಮೇಶ ಕೋಳ್ಕೂರ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ಸಚಿನ್ ಮತ್ತು ವಿಶಾಲ ಎಂಬ ಇಬ್ಬರು ಯುವಕರು ದೂರದ ಬೆಟ್ಟ ನೋಡಿ ಅಲ್ಲಿಗೆ ತೆರಳಿದ್ದರು. ಆದರೆ, ಹಲವು ಆಸೆಗಳನ್ನು ಹೊತ್ತು ಅಲ್ಲಿಗೆ ಹೋದ ಅವರಿಗೆ ಕೆಲ ದಿನಗಳ ಬಳಿಕ ತಾವು ಮೋಸಕ್ಕೊಳಗಾಗಿರುವುದಾಗಿ ಗೊತ್ತಾಗಿದೆ. ಹಲವು ಸಂಕಷ್ಟಗಳನ್ನು ಎದುರಿಸಿದ ಬಳಿಕ ಮತ್ತೆ ತಮ್ಮ ಸ್ವಗ್ರಾಮಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ'' ಎಂದು ಯುವಕರ ಮಹಾಪಲಾಯನ ರೋಚಕತೆಯನ್ನು ತೆರೆದಿಟ್ಟರು. ಅಲ್ಲದೇ ಅವರನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಸಹಕರಿಸಿದ ಸಂಸದ ರಮೇಶ ಜಿಗಜಿಣಗಿ, ಪ್ರಧಾನಿ ಮೋದಿ ಅವರಿಗೆ ಇದೇ ವೇಳೆ ಧನ್ಯವಾದ ಸಹ ಹೇಳಿದರು.
''ವ್ಯಕ್ತಿಯೊಬ್ಬ ಕುವೈತ್‌ಗೆ ಕರೆದೊಯ್ದು ಅಲ್ಲಿ ಹೇಳಿದ ಉದ್ಯೋಗ ಕೊಡದೆ, ಊಟ, ವಸತಿ ಕಲ್ಪಿಸದೆ ಹಿಂಸೆ ನೀಡುತ್ತಿದ್ದ. ತರಕಾರಿ ಪ್ಯಾಕಿಂಗ್ ಕೆಲಸ ಎಂದು ಹೇಳಿ ಅಲ್ಲಿ ಒಂಟೆ ಕಾಯಲು ಹೇಳಿದ್ದರು. ನಮ್ಮ ಫೋನ್ ಕಸಿದುಕೊಂಡಿದ್ದಲ್ಲದೇ ಬೆದರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಮ್ಮಂತೆ ಕುವೈತ್‌ನಲ್ಲಿ ಅನೇಕರಿದ್ದಾರೆ. 32 ಸಾವಿರ ಸಂಬಳ ಎಂದು ಹೇಳಿ ಕಡಿಮೆ ಸಂಬಳ ಕೊಟ್ಟರು. ಅದರಲ್ಲೂ ಆರು ತಿಂಗಳ ಪೈಕಿ ಕೇವಲ ಮೂರು ತಿಂಗಳ ಮಾತ್ರ ಸಂಬಳ ಕೊಟ್ಟರು. ಇನ್ನಷ್ಟು ಬಾಕಿ ಇರಿಸಿಕೊಂಡಿದ್ದರು. ಒಂದು ಲಕ್ಷ ರೂಪಾಯಿ ಏಜೆಂಟರ್ಗೆ ಕೊಟ್ಟಿದ್ದೇವೆ. ಅವರಿಗೆ ಹೇಳದೇ ರಾಯಭಾರಿ ಕಚೇರಿಗೆ ಬಂದು ಅಲ್ಲಿಂದ ಮುಂಬೈಗೆ ಬಂದು ಬಳಿಕ ತವರಿಗೆ ಮರಳಿದೆವು. ಸಂಸದರ ಸಹಾಯ ಇರದಿದ್ದರೆ ನಾವು ಅಲ್ಲೇ ಸಾಯುತ್ತಿದ್ದೆವು. ಅವರ ಉಪಕಾರ ಎಂದೂ ಮರೆಯಲ್ಲು ಸಾಧ್ಯವಿಲ್ಲ'' ಎಂದು ಮೋಸಕ್ಕೊಳಗಾದ ಯುವಕರು ತಾವು ಎದುರಿಸಿದ ಅಲ್ಲಿನ ಸಂಕಷ್ಟಗಳನ್ನು ವಿವರಿಸಿದರು.
ಇದನ್ನೂ ಓದಿ: 'ಮದುವೆ ಭರವಸೆ ನೀಡಿ ವಂಚಿಸಿದ ಕಾನ್ಸ್ಟೇಬಲ್': ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ