ಸಾರ್ವಜನಿಕವಾಗಿ ಗನ್ ಹಿಡಿದು ಓಡಾಟ.. ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು - ಗುಜರಾತ್ ಲೇಟೆಸ್ಟ್ ಕ್ರೈಂ ನ್ಯೂಸ್
🎬 Watch Now: Feature Video
ಅಹಮದಾಬಾದ್(ಗುಜರಾತ್): ಮಣಿನಗರದ ಎಲ್ಜಿ ಆಸ್ಪತ್ರೆ ಬಳಿ ಯುವಕನೊಬ್ಬ ಸಾರ್ವಜನಿಕವಾಗಿ ಕೈಯಲ್ಲಿ ಬಂದೂಕು ಹಿಡಿದು ಜ್ಯುವೆಲ್ಲರ್ಸ್ ಶೋ ರೂಂ ದರೋಡೆ ಮಾಡಲು ಯತ್ನಿಸಿದ್ದ. ಆದರೆ ಯುವಕನನ್ನು ಕಂಡ ಸ್ಥಳೀಯರು ಆತನನ್ನು ಹಿಡಿದು ಮಣಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಯುವಕ ತಾನು ಸೈನಿಕನಾಗಿದ್ದು, ಲೂಟಿ ಮಾಡುವ ಉದ್ದೇಶದಿಂದ ಜ್ಯುವೆಲರ್ಸ್ ಶಾಪ್ ನುಗ್ಗಿದ್ದಾಗಿ ತಿಳಿಸಿದ್ದಾನೆ. ಯುವಕನ ವಿರುದ್ಧ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಣಿನಗರ ಚಾರ್ ರಸ್ತೆ ಬಳಿಯ ಜ್ಯುವೆಲ್ಲರ್ಸ್ನಲ್ಲಿ ಸಂಜೆ ವೇಳೆ ವ್ಯಾಪಾರಿಯೊಬ್ಬರು ಅಂಗಡಿಯಲ್ಲಿದ್ದರು. ಆಗ ಏಕಾಏಕಿ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡ ಯುವಕಯೊಬ್ಬ ಕೈಯಲ್ಲಿ ಬ್ಯಾಗ್ ಹಿಡಿದು ಶೋರೂಂ ಪ್ರವೇಶಿಸಿದ್ದ. ಬಳಿಕ ತನ್ನ ಬ್ಯಾಗ್‌ನಿಂದ ಬಂದೂಕು ಹೊರತೆಗೆದು ದರೋಡೆಗೆ ಯತ್ನಿಸಿದ್ದ. ಉದ್ಯಮಿಯ ಜೋರಾಗಿ ಕಿರುಚಿಕೊಂಡಾಗ ಆತ ಶೋ ರೂಂನಿಂದ ಓಡಿಹೋಗಲು ಪ್ರಯತ್ನಿಸಿದ್ದಾನೆ.
ಗಾಳಿಯಲ್ಲಿ ಗುಂಡು ಹಾರಿಸಿದ ಯುವಕ: ಸುತ್ತಮುತ್ತ ನೆರೆದಿದ್ದ ಜನರು ಯುವಕನನ್ನು ಹಿಡಿಯಲು ಹಿಂಬಾಲಿಸಿದಾಗ ಯುವಕ ತನ್ನಲ್ಲಿದ್ದ ಗನ್ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೂ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಜನರು ಯುವಕನನ್ನು ಹಿಡಿದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಶೋರೂಂನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಜ್ಯುವೆಲರ್ಸ್ ಮಾಲೀಕ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿಯ ವಿರುದ್ಧ ಲೂಟಿ ಯತ್ನದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ.
ಯುವಕನ ಹೆಸರು ಲೋಕೇಂದ್ರ ಸಿಂಗ್ ಶೇಖಾವತ್. ಆತ ಮೂಲತಃ ರಾಜಸ್ಥಾನದ ಜೈಪುರದವನು ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ 109 ಮರಾಠಾ ಲೈಟ್ ಫ್ರಂಟ್ ಲೈನ್ ಬೆಟಾಲಿಯನ್ನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಿ ಹೇಳಿದ್ದಾನೆ. 5.50 ಲಕ್ಷ ಸಾಲ ಪಡೆದಿದ್ದು, ಅದನ್ನು ತೀರಿಸಲು ದರೋಡೆಗೆ ಯೋಜನೆ ರೂಪಿಸಿದ್ದಾಗಿ ಯುವಕ ಪೊಲೀಸರಿಗೆ ತಿಳಿಸಿದ್ದಾನೆ.
'ಜೈಪುರದಿಂದ ಅಹಮದಾಬಾದ್‌ಗೆ ರೈಲಿನಲ್ಲಿ ಬಂದು ಖೋಖ್ರಾ ಬಳಿಯ ಹೋಟೆಲ್‌ನಲ್ಲಿ ಎರಡು ದಿನ ತಂಗಿದ್ದನಂತೆ. ಈ ಆಭರಣದ ಅಂಗಡಿಯಲ್ಲಿ ಸಂಜೆ ದರೋಡೆಗೆ ಯತ್ನಿಸಿದ್ದಾಗಿ ಯುವಕ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ನಿಜವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನಾ?, ಆತ ಯಾರಿಂದ ಆಯುಧ ತಂದಿದ್ದಾನೆ?, ಯಾರಾದರೂ ಈ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆ ತಿಳಿಯಲು ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ'- ಅಹಮದಾಬಾದ್ ಎಸಿಪಿ ಪ್ರದೀಪ್ ಸಿಂಗ್ ಜಡೇಜಾ.
ಇದನ್ನೂ ಓದಿ: ಗನ್ ತೋರಿಸಿ ಮಹಿಳೆಯ ಸರಗಳ್ಳತನ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ