ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಪರಿಸರ ದಿನಾಚರಣೆ- ವಿಡಿಯೋ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಶಿವಮೊಗ್ಗ : ಪ್ರಾಣಿ, ಪಕ್ಷಿ, ವನ ಸೇರಿದಂತೆ ನಮ್ಮ ಪರಿಸರವನ್ನು ಪ್ರೀತಿ ಮತ್ತು ಕಾಳಜಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ನೀಡಿದರೆ ವಿಶ್ವ ಪರಿಸರ ದಿನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸಂಕಲ್ಪ ತೊಡೋಣ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಕರೆ ಕೊಟ್ಟರು.
ಇಂದು ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ, ಭಾರತ ಸರ್ಕಾರ, ಬೆಂಗಳೂರು ಮತ್ತ ಅರಣ್ಯ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಆರಗ ಜ್ಞಾನೇಂದ್ರ ಉದ್ಘಾಟಿಸಿ ಮಾತನಾಡಿದರು.
'ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸಿ’ ಎಂಬ ಘೋಷವಾಕ್ಯದಡಿ ಈ ಸಾಲಿನ ಪರಿಸರ ದಿನಾಚರಿಸುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ನಮಗೆ ಮಾರಕ. ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿಯೂ ನಾವು ನೆಮ್ಮದಿಯಿಂದ ಬದುಕುತ್ತಿದ್ದೆವು. ಮಾರಕವಾಗಿರುವ ಪ್ಲಾಸ್ಟಿಕ್ ಉಪಯೋಗಿಸುವುದಿಲ್ಲ ಎಂಬ ಸಂಕಲ್ಪ ಈಗಿನಿಂದಲೇ ಮಾಡೋಣ ಎಂದು ಹೇಳಿದರು.
ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸುತ್ತದೆ, ದುರಾಸೆಯನ್ನಲ್ಲ ಎಂಬುದನ್ನು ನೆನಪಿಟ್ಟು ಪ್ರಜ್ಞಾವಂತರಾಗಿ ಪರಿಸರದ ಕಾಳಜಿ ವಹಿಸಬೇಕು. ಜಿಲ್ಲೆಯಲ್ಲಿ ಹಿಂದಿದ್ದ ನಿತ್ಯ ಹರಿದ್ವರ್ಣದ ಕಾಡು ಕಳೆದುಹೋಗುತ್ತಿದೆ. ತಾಪಮಾನ ಏರುತ್ತಿದೆ. ಆದ್ದರಿಂದ ನಮ್ಮನ್ನೆಲ್ಲ ರಕ್ಷಿಸುವ ಪರಿಸರ ಉಳಿಸಲು ಕಾಳಜಿಯಿಂದ ವರ್ತಿಸಬೇಕು. ಒಂದೊಂದು ಹನಿ ನೀರೂ ನಮ್ಮ ದೇಹದ ಒಂದೊಂದು ಹನಿ ರಕ್ತದಂತೆ. ಕಾಪಾಡೋಣ. ಪ್ಲಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ಮಾಲಿನ್ಯ ತಡೆದು ಪರಿಸರ ಸಂರಕ್ಷಣೆ ಮಾಡುವ ಪ್ರತಿಜ್ಞೆ ಮಾಡೋಣ ಎಂದರು.
ಇದನ್ನೂ ಓದಿ : ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಬೆಳೆಸುವ ಜವಾಬ್ದಾರಿಯನ್ನೂ ಅವರಿಗೆ ನೀಡಿ: ಡಿ.ಕೆ.ಶಿವಕುಮಾರ್