ರಸ್ತೆ ಬದಿ ಹಳೆ ಕಟ್ಟಡ ನೆಲಸಮದ ವೇಳೆ ಗೋಡೆ ಕುಸಿತ: ಮಹಿಳಾ ಟೆಕ್ಕಿ ದುರ್ಮರಣ - ಮಹಿಳಾ ಟೆಕ್ಕಿ
🎬 Watch Now: Feature Video
ಚೆನ್ನೈ (ತಮಿಳುನಾಡು): ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಟ್ಟಡವೊಂದು ಕುಸಿದು ಬಿದ್ದು ಮಹಿಳಾ ಟೆಕ್ಕಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಇಂದು ಬೆಳಗ್ಗೆ ನಡೆದಿದೆ. 25 ವರ್ಷದ ಪ್ರಿಯಾ ಎಂಬುವವರೇ ಮೃತರು ಎಂದು ಗುರುತಿಸಲಾಗಿದೆ. ಖಾಸಗಿ ಐಟಿ ಕಂಪನಿಯ ಉದ್ಯೋಗಿಯಾದ ಮಧುರೈ ಮೂಲದ ಪ್ರಿಯಾ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕೆಲಸಕ್ಕಾಗಿ ಚೆನ್ನೈಗೆ ಬಂದು ನೆಲೆಸಿದ್ದರು ಎಂದು ತಿಳಿದು ಬಂದಿದೆ.
ಚೆನ್ನೈನ ಮೌಂಟ್ ರಸ್ತೆಯಲ್ಲಿರುವ ಥೌಸಂಡ್ ಲೈಟ್ ಸುರಂಗದ ಸಮೀಪ ಹಳೆಯ ಕಟ್ಟಡಗಳ ನೆಲಸಮ ಕಾರ್ಯ ಪ್ರಗತಿಯಲ್ಲಿದೆ. ಇಂದು ಬೆಳಗ್ಗೆ ಜೆಸಿಬಿ ಯಂತ್ರದ ಮೂಲಕ ಕಟ್ಟಡಗಳನ್ನು ಕೆಡವುವ ಕಾರ್ಯ ನಡೆಯುತ್ತಿತ್ತು. ಆಗ ಏಕಾಏಕಿ ಕಟ್ಟಡದ ಒಂದು ಭಾಗ ಕುಸಿದು ಹೊರಗೆ ಬಿದ್ದಿದೆ. ಆ ವೇಳೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರಿಯಾ ಅವಶೇಷಗಳಡಿ ಸಿಲುಕಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು 20 ನಿಮಿಷಗಳ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಪ್ರಿಯಾ ರಕ್ಷಿಸಿ, ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಅಷ್ಟರಲ್ಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಿಯಾ ಕಚೇರಿಗೆ ಹೋಗಲಿ ಎಂದು ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ವೇಳೆ ಮತ್ತೊಬ್ಬ ಪಾದಚಾರಿ ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರಕ್ಕೆ ಬೆಂಕಿ ಬಿದ್ದ ಸುಳ್ಳು ವದಂತಿ: ಥಿಯೇಟರ್‌ನಿಂದ ಹೊರ ಬಂದ ಪ್ರೇಕ್ಷಕರು