thumbnail

ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್‌ ಡ್ರಮ್​ನಲ್ಲಿ ಮಹಿಳೆಯ ಶವ ಪತ್ತೆ!

By

Published : Mar 14, 2023, 7:06 AM IST

Updated : Mar 14, 2023, 5:52 PM IST

ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಕಳೆದ ಎರಡು ತಿಂಗಳ ಹಿಂದೆ ನೀಲಿ ಡ್ರಮ್​ನಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಮಾದರಿಯಲ್ಲೇ ಮತ್ತೊಂದು ಶವ ದೊರೆತಿದೆ. ಬೈಯ್ಯಪ್ಪನಹಳ್ಳಿ‌ ರೈಲ್ವೇ ನಿಲ್ದಾಣ ಪ್ರಮುಖ ದ್ವಾರದಲ್ಲಿ ನೀಲಿ‌ ಬಣ್ಣದ ಡ್ರಮ್​ನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಕಂಡುಬಂದಿದೆ. ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಮೂವರು ದುಷ್ಕರ್ಮಿಗಳು ಶವವಿರುವ ನೀಲಿ ಡ್ರಮ್ ಅ​ನ್ನು ಆಟೋದಲ್ಲಿ‌ ತಂದು ರೈಲ್ವೇ ನಿಲ್ದಾಣದಲ್ಲಿ‌ ಇಟ್ಟು ಹೋಗಿದ್ದಾರೆ. ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಗೆ ಅಂದಾಜು 30 ವಯಸ್ಸಿರಬಹುದು ಎಂದು ಹೇಳಲಾಗಿದೆ. 

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ‌ ಮಾತನಾಡಿದ ರೈಲ್ವೇ ಎಸ್ಪಿ ಸೌಮ್ಯಲತಾ, ನಮಗೆ ನೀಲಿ ಡ್ರಮ್​ನಿಂದ ಕೊಳೆತ ವಾಸನೆ ಬರುತ್ತಿದೆ ಎಂದು ದೂರವಾಣಿ ಕರೆ ಬಂದಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶವ ಇರುವುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ. ಮೃತರು ಯಾರು ಎಂದು ಪತ್ತೆ ಹಚ್ಚಲಾಗುವುದು. ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ ಎಂದರು.

ಯಶವಂತಪುರದಲ್ಲೂ ಇಂಥದ್ದೇ ಪ್ರಕರಣ: ಜನವರಿ 5 ರಂದು ಯಶವಂತಪುರ ರೈಲ್ವೇ ನಿಲ್ದಾಣದಲ್ಲೂ ಇದೇ ರೀತಿ ನೀಲಿ ಬಣ್ಣದ ಡ್ರಮ್​ವೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಪ್ಲಾಟ್‌ಫಾರ್ಮ್ -1 ರಲ್ಲಿ ಬಟ್ಟೆರಾಶಿಯೊಂದಿಗೆ ಡ್ರಮ್​ನೊಳಗೆ ಶವ ಹುದುಗಿಸಿಡಲಾಗಿತ್ತು. ರಕ್ತಸಿಕ್ತವಾಗಿ‌ ಸಿಕ್ಕ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವೇಲ್‌ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿತ್ತು. ಈ ಮಹಿಳೆ ಉತ್ತರ ಭಾರತ ಮೂಲದವರು ಎಂದು ಹೇಳಲಾಗಿತ್ತು. 

ಲುಕ್​ ಔಟ್​ ನೋಟಿಸ್​: ಮೃತ ಮಹಿಳೆಯ ಗುರುತು ಪತ್ತೆ ಹಚ್ಚಲು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ರೈಲ್ವೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಿರಂತರ ಶೋಧ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಹೀಗಾಗಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು.  

ಡ್ರಮ್‌ನಲ್ಲಿ ದೊರೆತ ಶವವನ್ನು ಹಂತಕರು ವಿಶಾಖಪಟ್ಟಣದಿಂದ ಬೆಂಗಳೂರಿಗೆ ಬರುವ ರೈಲಿನಲ್ಲಿ ಸಾಗಾಟ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಇದೇ ಮಾಹಿತಿ ಆಧರಿಸಿ ವಿಶಾಖಪಟ್ಟಣದಿಂದ ಯಶವಂತಪುರದವರೆಗಿನ ರೈಲ್ವೇ ಪೊಲೀಸ್ ಠಾಣೆ ಹಾಗೂ ಕಾನೂನು‌ ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ತನಿಖಾ ತಂಡ ತೆರಳಿ ಮಹಿಳೆ‌ ಮಿಸ್ಸಿಂಗ್ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಅಲ್ಲದೇ ವಿಶಾಖಪಟ್ಟಣದಿಂದ ಯಶವಂತಪುರದವರೆಗೂ ಸಿಗುವ ರೈಲ್ವೇ ಪೊಲೀಸ್ ಠಾಣೆ ಹಾಗೂ‌ ಇನ್ನಿತರ ಪ್ರಮುಖ‌ ಸ್ಥಳಗಳಲ್ಲಿ ಲುಕ್​ಔಟ್​ ನೋಟಿಸ್​ ಅಂಟಿಸಲಾಗಿತ್ತು ಎಂದು ಈ ಹಿಂದೆ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ​ ಸೌಮ್ಯಲತಾ ಹೇಳಿದ್ದರು. 

ಇದನ್ನೂ ಓದಿ: ನೀಲಿ ಡ್ರಮ್​ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಪೋಸ್ಟ್​ ಮಾರ್ಟಮ್​ ವರದಿಯಲ್ಲಿ ಏನಿದೆ?

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿರುವ ಎಲ್ಲಾ ಸಿಸಿಟಿವಿಗಳನ್ನೂ ಪರಿಶೀಲಿಸಿದ್ದರು. ಆದರೆ ಘಟನೆ ಸಂಭವಿಸಿ ಎರಡು ತಿಂಗಳಾದರೂ ಕೊಲೆ ರಹಸ್ಯ ಬಯಲಾಗಿಲ್ಲ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿರುವಾಗಲೇ ಇದೀಗ ಮತ್ತೊಂದು ಶವ ಇದೇ ಮಾದರಿಯಲ್ಲಿ ಪತ್ತೆಯಾಗಿದೆ. ಯಶವಂತಪುರ ಪ್ರಕರಣದ ಹಂತಕರೇ ಈ ಕೊಲೆ ಮಾಡಿದ್ದಾರಾ?.ಇಂಥ ಕೊಲೆ ಪ್ರಕರಣಗಳ ಅಸಲಿಯತ್ತೇನು? ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ: ಸಕ್ಕರೆನಾಡಲ್ಲಿ ಮತ್ತೊಂದು ಭಯಾನಕ ಮರ್ಡರ್

Last Updated : Mar 14, 2023, 5:52 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.