ಹಾವೇರಿ: ವಿವಿಧೆಡೆ ಕಾಡಾನೆ ದಾಳಿ, ಬೆಳೆ ನಾಶ- ವಿಡಿಯೋ - ಆನೆಗಳ ಉಪಟಳ
🎬 Watch Now: Feature Video
Published : Nov 22, 2023, 9:42 AM IST
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ, ಬಾಳೆ, ಕಬ್ಬು ಪುಡಿಗಟ್ಟಿವೆ. ಮಂತಗಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ನಾಶಪಡಿಸಿವೆ. ಕಳೆದೆರಡು ದಿನಗಳಿಂದ ಗ್ರಾಮದ ಸುತ್ತ ಬೀಡುಬಿಟ್ಟಿರುವ ಆನೆಗಳಿಂದಾಗಿ ಕಾಮನಹಳ್ಳಿ, ಮಂತಗಿ, ಹಂದಿಹಾಳ, ಶಿವಪೂರ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ನಿನ್ನೆ (ಮಂಗಳವಾರ) ರಾತ್ರಿ ವೇಳೆಯಲ್ಲಿ ಐದು ಆನೆಗಳ ಹಿಂಡು ತೋಟಗಳಿಗೆ ನುಗ್ಗಿದ್ದವು. ಅರಣ್ಯ ಇಲಾಖೆಯ ಸಿಬ್ಬಂದಿ ಅವುಗಳನ್ನು ಹಿಮ್ಮೆಟ್ಟಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವೇ ಸೆರೆ ಹಿಡಿದು ಕಾಡಿಗೆ ಬಿಟ್ಟು ಬರಬೇಕು ಎಂದು ರೈತರು ಒತ್ತಾಯಿಸಿದರು.
ಆನೆಗಳ ಹಿಂಡು ಇರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹೆಜ್ಜೆ ಗುರುತು ಮತ್ತು ಲದ್ದಿ ಪತ್ತೆಯಾಗಿದೆ. ಆನೆಗಳಿರುವ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಇಲಾಖಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಾಡಾನೆಗಳು ಜಮೀನುಗಳಲ್ಲಿ ಬೀಡು ಬಿಟ್ಟಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಧ್ವನಿವರ್ಧಕದ ಮೂಲಕ ಮನವಿ ಮಾಡಿದ್ದಾರೆ. ಬುಧವಾರ ಸಂಜೆಯವರೆಗೂ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದರು.
ಇದನ್ನೂ ಓದಿ: ಹಾಸನ: ಕ್ಯಾಂಟರ್ ಲಾರಿ-ಬೈಕ್ ನಡುವೆ ಅಪಘಾತ: ತಾಯಿ, ಮಗ ಸ್ಥಳದಲ್ಲೇ ಸಾವು, ಸ್ಥಳೀಯರ ಆಕ್ರೋಶ