ದಾವಣಗೆರೆ: ಕಾಡಾನೆ ಸೆರೆಗೆ ಸಕ್ಕರೆಬೈಲು ಆನೆಗಳಿಂದ ಕಾರ್ಯಾಚರಣೆ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
ದಾವಣಗೆರೆ: ಚನ್ನಗಿರಿ ತಾಲೂಕಿನ ಸೇವಾನಗರ, ಸೋಮಲಾಪುರ, ಕಾಶಿಪುರ ಹಾಗೂ ಜಕಲಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಶನಿವಾರವಷ್ಟೇ ಆನೆ ದಾಳಿಯಿಂದ ಬಾಲಕಿ ಮೃತಪಟ್ಟಿದ್ದಳು. ಘಟನೆಯ ನಂತರ ಗ್ರಾಮಸ್ಥರು ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಶಿವಮೊಗ್ಗದ ಸಕ್ಕರೆಬೈಲು ಆನೆ ಬಿಡಾರದಿಂದ ಬಾಲಯ್ಯ, ಸಾಗರ್, ಬಹದ್ದೂರ್ ಎಂಬ ಮೂರು ಸಾಕಾನೆಗಳನ್ನು ಕರೆತಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚನ್ನಗಿರಿ ತಾಲೂಕಿನ ಸೂಳೆಕೇರೆ ಭಾಗದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಸಂಚರಿಸುವ ಸಾಧ್ಯತೆ ಇದೆ. ಹೀಗಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಹಾಗೂ ಸಾರ್ವಜನಿಕರು ಎಚ್ಚರದಿಂದಿರಲು ಇಲಾಖೆ ಸೂಚನೆ ನೀಡಿದೆ.
ಕಾಡಾನೆ ಸೆರೆಗೆ ಭದ್ರಾವತಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಆನೆಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಸೋಮಲಾಪುರ ಗ್ರಾಮದಿಂದ 8 ಕಿಮೀ. ದೂರದಲ್ಲಿ ಕಾಡಾನೆಯ ಚಲನವಲನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಇರುವ ಮೂರು ಆನೆಗಳ ಜೊತೆ ಇನ್ನೂ ಮೂರು ಆನೆಗಳನ್ನು ಕರೆತಂದು ಕಾರ್ಯಾಚರಣೆ ಮುಂದುವರೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಡಿನಿಂದ ನಾಡಿಗೆ ಬಂದ ಒಂಟಿ ಆನೆ, ಗಜರಾಯನ ದಾಳಿಯಿಂದ ಯುವತಿ ಸಾವು