ಟರ್ಕಿ ಭೀಕರ ಭೂಕಂಪದ ನಡುವೆಯೂ ನವಜಾತ ಶಿಶುಗಳ ರಕ್ಷಿಸಿದ ನರ್ಸ್‌ಗಳು.. ವಿಡಿಯೋ - ಟರ್ಕಿ ಮತ್ತು ಸಿರಿಯಾ
🎬 Watch Now: Feature Video
ಗಾಜಿಯಾಂಟೆಪ್ (ಟರ್ಕಿ): ಟರ್ಕಿ ಮತ್ತು ಸಿರಿಯಾದಲ್ಲಿ ಕಳೆದ ಸೋಮವಾರ ನಡೆದ 7.8 ತೀವ್ರತೆಯ ಭೀಕರ ಭೂಕಂಪವು ಇದುದವರೆಗೆ 28 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಇದರ ನಡುವೆ ಟರ್ಕಿಯ ಗಾಜಿಯಾಂಟೆಪ್‌ನ ಆಸ್ಪತ್ರೆಯಲ್ಲಿ ಇಬ್ಬರು ನರ್ಸ್‌ಗಳು ನವಜಾತ ಶಿಶುಗಳ ರಕ್ಷಣೆಗೆ ಧಾವಿಸಿರುವ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
ಎರಡು ರಾಷ್ಟ್ರಗಳು ಪ್ರಬಲ ಭೂಕಂಪದಿಂದ ಸಂಪೂರ್ಣವಾಗಿ ಕುಸಿದು ಹೋಗಿವೆ. ಇದೇ ವೇಳೆ ಗಾಜಿಯಾಂಟೆಪ್‌ನ ಆಸ್ಪತ್ರೆಯೊಂದರ ಪ್ರದೇಶದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ಇಡೀ ಕಟ್ಟಡವು ಅಲುಗಾಡತೊಡಗಿದೆ. ಆಸ್ಪತ್ರೆಯಲ್ಲಿರುವ ಸಿಸಿಟಿವಿಯಲ್ಲಿ ಭೂಕಂಪದ ಜೊತೆಗೆ ಮನ ಮಿಡಿಯುವ ದೃಶ್ಯಗಳು ಸೆರೆಯಾಗಿವೆ.
ಆಸ್ಪತ್ರೆಯ ಶಿಶುಗಳ ವಾರ್ಡ್ನಲ್ಲಿ ಇನ್‌ಕ್ಯುಬೇಟರ್‌ಗಳಲ್ಲಿ ನವಜಾತ ಶಿಶುಗಳನ್ನು ಆರೈಕೆ ಮಾಡಲಾಗುತ್ತಿತ್ತು. ಇದೇ ವೇಳೆ ಭೂಕಂಪ ಉಂಟಾಗಿ, ಇನ್‌ಕ್ಯುಬೇಟರ್‌ಗಳು ಅಲುಗಾಡಿ ಬೀಳುವ ಸ್ಥಿತಿಯಲ್ಲಿ ಇದ್ದವು. ಆಗ ಇಬ್ಬರು ನರ್ಸ್‌ಗಳು ತಕ್ಷಣವೇ ದೌಡಾಯಿಸಿ ನವಜಾತ ಶಿಶುಗಳನ್ನು ಮಲಗಿಸಿದ್ದ ಇನ್‌ಕ್ಯುಬೇಟರ್‌ಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಮೂಲಕ ಅಪಾಯದಿಂದ ತಪ್ಪಿಸಿದ್ದಾರೆ. ಈ ದೃಶ್ಯಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಲ್ಲದೇ, ಟರ್ಕಿಯ ರಾಜಕಾರಣಿ ಫಾತ್ಮಾ ಸಾಹಿನ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಶಿಶುಗಳ ರಕ್ಷಣೆ ಮಾಡಿದ ನರ್ಸ್ಗಳನ್ನು ಡೆವ್ಲೆಟ್ ನಿಜಾಮ್ ಮತ್ತು ಗಜ್ವಲ್ ಕ್ಯಾಲಿಸ್ಕನ್ ಎಂದು ಗುರುತಿಸಲಾಗಿದೆ. ಇಡೀ ಕಟ್ಟಡ ಅಲುಗಾಡುತ್ತಿದ್ದಾಗ ಹೊರಗೆ ಓಡಿ ಹೋಗದೆ, ತಮ್ಮ ಜೀವದ ಹಂಗು ತೊರೆದು ಶಿಶುಗಳ ರಕ್ಷಿಸಿದ್ದಾರೆ. ಈ ನರ್ಸ್ಗಳ ಕಾರ್ಯಕ್ಕೆ ನೆಟಿಜನ್‌ಗಳು ಶ್ಲಾಘಿಸಿದ್ದಾರೆ. ಇನ್ನು, ಪ್ರಬಲ ಭೂಕಂಪದಿಂದ ಟರ್ಕಿಯ ಸಾವಿನ ಒಟ್ಟು ಸಂಖ್ಯೆ 24,617ಕ್ಕೆ ಏರಿಕೆಯಾದರೆ, ಸಿರಿಯಾದಲ್ಲಿ 3,575 ಸಾವುಗಳು ದೃಢಪಟ್ಟಿವೆ.
ಇದನ್ನೂ ಓದಿ: ಆಪರೇಷನ್ ದೋಸ್ತ್: ಭಾರತದಿಂದ ಪರಿಹಾರ ಸಾಮಗ್ರಿ ಹೊತ್ತ 7ನೇ ವಿಮಾನ ಟರ್ಕಿಗೆ ರವಾನೆ