ಮೂಲಭೂತ ಸೌಲಭ್ಯ ಕನಸು.. ಬೇಡಿಕೆ ಈಡೇರಿಲ್ಲವೆಂದು ಮತದಾನ ಬಹಿಷ್ಕರಿಸಿದ ಕನಸಿನಕಟ್ಟೆ ಜನರು
🎬 Watch Now: Feature Video
ಶಿವಮೊಗ್ಗ : ತಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಮತದಾನವನ್ನೆ ಗ್ರಾಮಸ್ಥರು ಬಹಿಷ್ಕಾರ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಭದ್ರಾವತಿ ತಾಲೂಕಿನ ಕನಸಿನಕಟ್ಟೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ರಸ್ತೆ, ಬಸ್ ವ್ಯವಸ್ಥೆ, ಮೊಬೈಲ್ ಟವರ್ ಸೇರಿದಂತೆ ರುದ್ರಭೂಮಿಗಾಗಿ ಆಗ್ರಹಿಸಿ ಮತದಾನವನ್ನು ಬಹಿಷ್ಕಾರ ಮಾಡಿದ್ದಾರೆ.
ಕನಸಿನಕಟ್ಟೆ ಗ್ರಾಮಸ್ಥರು ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ತಾವು ಮತದಾನ ಬಹಿಷ್ಕಾರ ಹಾಕುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ನೆಪಮಾತ್ರಕ್ಕೆ ಬಂದ ಅಧಿಕಾರಿಗಳು ತಾವು ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ್ದರು. ಆದರೆ ಯಾವುದೇ ಭರವಸೆ ಈಡೇರಿಸದ ಕಾರಣ ಇಂದು ನಡೆದ ಮತದಾನವನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.
ತಮ್ಮ ಮುಂದಿನ ಪೀಳಿಗೆಗಾಗಿ ತಮ್ಮ ಕನಸಿನ ಗ್ರಾಮಕ್ಕೆ ಜಿಲ್ಲಾಡಳಿತದಿಂದ ಯಾವುದೇ ಸೂಕ್ತ ಭರವಸೆ ದೊರೆಯದ ಕಾರಣ ಇಂದು ಗ್ರಾಮಸ್ಥರು ಮತದಾನದಲ್ಲಿ ಭಾಗಿಯಾಗಿರಲಿಲ್ಲ. ಗ್ರಾಮದ 1081 ಮತದಾರರಲ್ಲಿ ಕೇವಲ 4 ಜನ ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮಧ್ಯಾಹ್ನ ವೇಳೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮೀ ಪ್ರಸಾದ್ ಅವರು ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಪಟ್ಟರು. ಆದರೂ ಸಹ ಗ್ರಾಮಸ್ಥರು ಸೊಪ್ಪು ಹಾಕಿಲ್ಲ. ಇದರಿಂದ ಊರಿನ ಜನರು ಮತದಾನದಿಂದ ದೂರವೇ ಉಳಿದರು. ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರಕ್ಕೆ ಒಳಡುವ ಮತಗಟ್ಟೆ 99 ರಲ್ಲಿ ಅಧಿಕಾರಿಗಳು ಮಾತ್ರ ಮತದಾರರನ್ನು ಕಾದು ಕಾದು ಸುಸ್ತಾದರು.
ಇದನ್ನೂ ಓದಿ : ಪ್ರಾಂತ್ಯವಾರು ಮತದಾನ: ಮೈಸೂರು ಭಾಗದಲ್ಲಿ ಅತ್ಯಧಿಕ, ಬೆಂಗಳೂರು ಪ್ರದೇಶ ಕೊನೆ