ಅಬ್ಬಬ್ಬಾ! ಬರೋಬ್ಬರಿ 22 ಲಕ್ಷ ರೂ.ಗೆ ತಾಲ್ಚೇರ್ ಗಣಪತಿ ಲಡ್ಡು ಹರಾಜು.. - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Sep 29, 2023, 5:36 PM IST
ಅಂಗುಲ್ (ಒಡಿಶಾ): ಒಡಿಶಾದ ಅಂಗುಲ್ನ ತಾಲ್ಚೇರ್ನಲ್ಲಿ ನಡೆಯುವ ಗಣೇಶ ಪೂಜೆಯು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಈ ವರ್ಷ ಕೂಡ ಅತ್ಯಂತ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗಿದೆ. ಪ್ರತಿ ವರ್ಷ ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಲಡ್ಡು ಹರಾಜಿಗೆ ಹಾಕುವುದು ಇಲ್ಲಿನ ವಾಡಿಕೆ. ಗಣೇಶನ ಪ್ರತಿಷ್ಠಾಪನೆ ದಿನ ಈ ಲಡ್ಡು ತಯಾರಿಸಿ ಗಣೇಶನಿಗೆ ನೈವೇದ್ಯಕ್ಕೆ ಇಡಲಾಗುತ್ತದೆ. ಗಣೇಶ ದೇವರಿಗೆ ಸಮರ್ಪಿಸಿದ್ದ 31 ಕಿಂಟ್ವಾಲ್ ಲಡ್ಡು ಈ ಬಾರಿ ದಾಖಲೆ ಬೆಲೆಗೆ ಹರಾಜಾಗಿದೆ.
ಬರೋಬ್ಬರಿ 22 ಲಕ್ಷದ 22 ಸಾವಿರದ 222 ರೂಪಾಯಿಗೆ ಲಾಲ್ಬಾಗ್ ರಾಜಾ ಇನ್ಸ್ಟಿಟ್ಯೂಟ್ ಆಫ್ ತಾಲ್ಚೇರ್ ಈ ಲಡ್ಡುವನ್ನು ಪಡೆದುಕೊಂಡಿದೆ. ತಾಲ್ಚೇರ್ ಗಣೇಶ ಪೂಜೆ ಇಲ್ಲಿಯ ಜನರಿಗೆ ಬಹಳ ವಿಶೇಷವಾಗಿದೆ. ಪೂಜೆಯ ನಂತರ ಲಡ್ಡು ಹರಾಜು ಪ್ರಕ್ರಿಯೆಯು ಆಡಳಿತ ಮಂಡಳಿ, ತಾಲ್ಚೇರ್ ಶಾಸಕ ಹಾಗೂ ಪೂಜಾ ಸಮಿತಿ ಕಾರ್ಯಕರ್ತರ ಸಮ್ಮುಖದಲ್ಲಿ ಗುರುವಾರ ನಡೆಯಿತು. ಅಂತಿಮವಾಗಿ, ಲಾಲ್ಬಾಗ್ ರಾಜಾ ಸಂಸ್ಥೆ ಬಹುದೊಡ್ಡ ಮೊತ್ತಕ್ಕೆ ಲಡ್ಡನ್ನು ಪಡೆದುಕೊಂಡಿದೆ. ಇದೇ ಇನ್ಸ್ಟಿಟ್ಯೂಟ್ ಕಳೆದ ವರ್ಷ 8 ಲಕ್ಷದ 70 ಸಾವಿರ ರೂಪಾಯಿಗೆ ಹರಾಜು ಗೆದ್ದಿತ್ತು.
ಪೂಜೆಯ ನಂತರ ಲಡ್ಡು ಹರಾಜು ನೋಡಲು ಸಾಕಷ್ಟು ಮಂದಿ ಜಮಾಯಿಸಿದ್ದರು. ಬೃಹತ್ ಲಡ್ಡನ್ನು ಟ್ರಕ್ನಲ್ಲಿ ಮೆರವಣಿಗೆ ಮೂಲಕ ಹರಾಜು ಸ್ಥಳಕ್ಕೆ ತರಲಾಯಿತು. ಅಂಗುಲ್ನ ತಾಲ್ಚೇರ್ನಲ್ಲಿ ವಿವಿಧ ಮಂಟಪಗಳಲ್ಲಿ ಆಕರ್ಷಕ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ. ಇಲ್ಲಿ 10 ದಿನಗಳ ಕಾಲ ಗಣೇಶ ಪೂಜೆಯನ್ನು ನೆರವೇರಿಸಲಾಗುತ್ತದೆ. ಬಳಿಕ ಗಣೇಶನ ನಿಮಜ್ಜನ ಕಾರ್ಯ ನಡೆಯುತ್ತದೆ. ಇಂದು (ಶುಕ್ರವಾರ) ತಾಲ್ಚೇರ್ ಗಣೇಶನ ನಿಮಜ್ಜನ ಮೆರವಣಿಗೆಯೂ ವಿಜೃಂಭಣೆಯಿಂದ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಗಣೇಶನ ನೈವೇದ್ಯಕ್ಕೆ ಇರಿಸಿದ್ದ ಲಡ್ಡು ₹ 32 ಸಾವಿರಕ್ಕೆ ಹರಾಜು: ವಿಡಿಯೋ