ರಾಯಚೂರು: ಅದ್ದೂರಿಯಾಗಿ ನೆರವೇರಿದ ಶ್ರೀ ಸೂಗೂರೇಶ್ವರ ಸ್ವಾಮಿ ಜೋಡು ರಥೋತ್ಸವ - ವಿಡಿಯೋ
🎬 Watch Now: Feature Video
ರಾಯಚೂರು : ಒಂದು ತಿಂಗಳ ಕಾರ್ತಿಕ ಮಾಸದ ಬಳಿಕ ಛಟ್ಟಿ ಅಮಾವಾಸ್ಯೆ ಐದು ದಿನದಂದು ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದಲ್ಲಿ ನೆಲೆಸಿರುವ ಶ್ರೀಸೂಗೂರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಿತು. ಇಂದು ಬೆಳಗ್ಗೆ ಶ್ರೀಸೂಗೂರೇಶ್ವರ ಸ್ವಾಮಿಗೆ ಮಹಾರುದ್ರಭಿಷೇಕಾ, ಮಹಾಪೂಜೆ, ಎಲೆಪೂಜೆ, ನಂದಿ ಸೇವೆ ಸೇರಿದಂತೆ ವಿವಿಧ ಪೂಜೆ-ಕೈಂಕಾರ್ಯಗಳು ನೆರವೇರಿದವು.
ಇದಾದ ಬಳಿಕ ಸಂಜೆಯ ವೇಳೆ ಪಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ದೇವಾಲಯದ ಒಳಗಡೆ ಪ್ರದಕ್ಷಿಣೆ ಹಾಕಲಾಯಿತು. ಪಲ್ಲಕಿಯೊಂದಿಗೆ ಉತ್ಸವ ಮೂರ್ತಿಯನ್ನು ರಥದ ಬಳಿ ತಂದು ಪೂಜೆ ಕೈಂಕಾರ್ಯಗಳು ಮಾಡಿ, ಮಹಾಮಂಗಳರಾತಿ ನಂತರ ಭಕ್ತರು ರಥಗಳನ್ನು ಎಳೆದರು. ಬಾಜಾ-ಭಜಂತ್ರಿಗಳು, ಕಲಾ ತಂಡಗಳು ರಥೋತ್ಸವಕ್ಕೆ ಮೆರಗು ನೀಡಿದವು. ಬೆಳಗ್ಗೆ ಭಕ್ತರು ಸ್ವಾಮಿ ದರ್ಶನಕ್ಕಾಗಿ ನಿರಂತರವಾಗಿ ಹರಿದು ಬರುತ್ತಿದ್ದು, ವಿವಿಧ ಪೂಜೆ ನೇರಿಸಿ ಸಂಜೆಯ ವೇಳೆ ಮಹಾರಥೋತ್ಸವದಲ್ಲಿ ಭಾಗವಹಿಸಿದರು. ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ಉತ್ತುತ್ತಿ ಎಸೆದು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.
ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಅಲ್ಲದೇ, ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ಭಕ್ತರು ರಥೋತ್ಸವ ನೋಡಿ ಕಣ್ತುಂಬಿಕೊಂಡರು. ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್, ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು. ಸಾಮಾನ್ಯವಾಗಿ ಎಲ್ಲ ಕಡೆ ಜಾತ್ರೆಗಳಲ್ಲಿ ಒಂದು ರಥವನ್ನು ಎಳೆಯುತ್ತಾರೆ. ಶ್ರೀಸೂಗೂರೇಶ್ವ ಸ್ವಾಮಿ ನೆಲೆಸಿರುವ ಈ ಕ್ಷೇತ್ರ ಎರಡು ರಥಗಳನ್ನು ಎಳೆಯುತ್ತಿದ್ದು, ಜೋಡು ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರೆಯಲ್ಲಿ ಬಂದ ಭಕ್ತರು ಭಕ್ತಿಯಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ರೆ ಬೃಡಕದ ವರ ನೀಡುತ್ತಾನೆ ಎಂಬ ನಂಬಿಕೆಯಿಂದ ಸತತವಾಗಿ ಈ ಸಂಭ್ರಮದಲ್ಲಿ ಭಾಗಹಿಸುತ್ತೇವೆ ಎನ್ನುತ್ತಾರೆ ಭಕ್ತರಾದ ಗೌರಮ್ಮ.
ಇದನ್ನೂ ಓದಿ : ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಅದ್ಧೂರಿ ಚಂಪಾ ಷಷ್ಠಿ ಆಚರಣೆ