ಕೃಷ್ಣಾ ನದಿಯಿಂದ ಅಧಿಕ ನೀರು ಬಿಡುಗಡೆ: ಜಲಾವೃತ ಸಂಗಮನಾಥನಿಗೆ ನೀರಲ್ಲೇ ವಿಶೇಷ ಪೂಜೆ
🎬 Watch Now: Feature Video
ವಿಜಯಪುರ: ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಗೆ ಕೃಷ್ಣಾ ನದಿಯಿಂದ ಅಧಿಕ ನೀರು ಹರಿಸಿದ ಕಾರಣ ಕಳ್ಳಕವಟಗಿಯ ಸಂಗಮನಾಥ ದೇವಸ್ಥಾನ ಮುಳುಗಡೆ ಹಂತ ತಲುಪಿದೆ. ಗರ್ಭಗುಡಿಗೆ ನೀರು ಪ್ರವೇಶಿಸಿದ ಕಾರಣ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲದಂತಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿ ದಿನ ಸಂಗಮನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಈ ವರ್ಷ ರಾತ್ರಿ 12 ಗಂಟೆ ಸುಮಾರಿಗೆ ದೇವಸ್ಥಾನದ ಅರ್ಚಕರು, ಗ್ರಾಮದ ಹಿರಿಯರು ಮಾತ್ರ ಸಂಗಮನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ಬಿಡುಗಡೆಯಾದ ಅಪಾರ ಪ್ರಮಾಣದ ನೀರಿನಿಂದ ಕಳ್ಳಕವಟಗಿ, ತಿಕೋಟಾ, ಬಬಲೇಶ್ವರ ಸುತ್ತಮುತ್ತಲಿನ ಹಳ್ಳ-ಕೊಳ್ಳ, ಕೆರೆ ಕಟ್ಟೆಗಳು ಮೈದುಂಬಿ ಹರಿಯುತ್ತಿವೆ. ದೇವಸ್ಥಾನದ ಪಕ್ಕದಲ್ಲಿರುವ ಝರಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ನೋಡುಗರ ಮನಸೆಳೆಯುತ್ತಿದೆ.
ಸಂಗಮನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ಆದರೂ ಪ್ರತಿ ವರ್ಷದಂತೆ ಈ ವರ್ಷವೂ ಶಿವರಾತ್ರಿ ದಿನ ಮಧ್ಯರಾತ್ರಿ 12 ಗಂಟೆಗೆ ಸಂಗಮನಾಥನಿಗೆ ಗ್ರಾಮಸ್ಥರು ಹಾಲು, ಮೊಸರು, ತುಪ್ಪ ಹಾಗೂ ಕೃಷ್ಣೆಯ ನೀರಿನಿಂದ ಅಭಿಷೇಕ ಮಾಡಿದ್ದಾರೆ. ಅಲ್ಲದೇ ಭಜನಾ ಪದ ಹಾಡುವ ಮೂಲಕ ಜಾಗರಣೆ ಸಹ ಮಾಡಿದರು. ಕಳೆದ 2 ವರ್ಷಗಳ ಹಿಂದೆ ಕೃಷ್ಣಾ, ಭೀಮಾ ನದಿಗೆ ಪ್ರವಾಹ ಬಂದಾಗ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಸ್ಥಾನ ಮುಳುಗಿತ್ತು. ಆದರೆ ಈಗ ಪ್ರವಾಹವಿಲ್ಲದಿದ್ದರೂ ಮತ್ತೆ ಸಂಗಮನಾಥ ದೇವಸ್ಥಾನದ ಗರ್ಭ ಗುಡಿಗೆ ನೀರು ನುಗ್ಗಿದೆ.