ಅನಾರೋಗ್ಯದಿಂದ ರಾಯಚೂರಿನ ಯೋಧ ಸಾವು.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ - ರಾಯಚೂರು ಮೂಲದ ಯೋಧ ಸಾವು
🎬 Watch Now: Feature Video
ರಾಯಚೂರು: ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧರೋರ್ವರು ಅನಾರೋಗ್ಯದಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದ ರಾಮಲಿಂಗ ನಾಯಕ(48) ಮೃತ ಯೋಧ. ಕಳೆದ 20 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದ ಇವರು ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಜಾತ್ರೆ ಮಹೋತ್ಸವ ಹಿನ್ನೆಲೆ ಸ್ವಗ್ರಾಮಕ್ಕೆ ಆಗಮಿಸಿ, ಬಳಿಕ ಮರಳಿ ಕೆಲಸಕ್ಕೆ ತೆರಳಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದ ಕಳೆದ ಸೋಮವಾರ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ತಾಲೂಕಿನ ಕಪಗಲ್ ಕ್ರಾಸ್‌ನಿಂದ ಸುಂಕೇಶ್ವರ ಗ್ರಾಮದವರಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮಾಜಿ ಯೋಧರು, ಗಣ್ಯರು, ಯುವಕರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ರಾಮಲಿಂಗ ನಾಯಕ ಸುಂಕೇಶ್ವರ ಗ್ರಾಮದ ತಾಯಮ್ಮ ಹಾಗೂ ಲಿಂಗಮಯ್ಯ ನಾಯಕ ದಂಪತಿಯ ಹಿರಿಯ ಪುತ್ರ. ಮೃತರು ಮೂವರು ಸಹೋದರರು, ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ. ಯೋಧನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಹೃದಯಾಘಾತದಿಂದ ಕೊಡಗು ಮೂಲದ ಯೋಧ ಸಾವು: ಹುಟ್ಟೂರಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ