Crocodiles Video: ರಾಯಚೂರಿನ ಕುರ್ವಕುಲ ಗ್ರಾಮದ ಬಳಿ ಮೊಸಳೆಗಳ ಹಿಂಡು! ನೋಡಿ - Crocodiles Video
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/26-07-2023/640-480-19099626-thumbnail-16x9-news.jpg)
ರಾಯಚೂರು: ಜಿಲ್ಲೆಯ ಬಲಭಾಗದಲ್ಲಿ ಕೃಷ್ಣ ನದಿ ವಿಶಾಲವಾಗಿ ಹರಿಯುತ್ತಿದೆ. ಆಗಾಗ್ಗೆ ನದಿ ತೀರಕ್ಕೆ ಆಹಾರವನ್ನರಿಸಿಕೊಂಡು ಮೊಸಳೆಗಳು ಬರುತ್ತವೆ. ನದಿತೀರದ ಗ್ರಾಮಗಳ ಬಳಿ ಮೊಸಳೆಗಳು ಪ್ರತ್ಯಕ್ಷವಾಗಿರುವ ಅನೇಕ ಉದಾಹರಣೆಗಳಿವೆ. ನಿನ್ನೆ ಕೂಡಾ ಮೊಸಳೆಗಳ ಹಿಂಡು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ರಾಯಚೂರು ತಾಲೂಕಿನ ಕುರ್ವಕುಲ ಗ್ರಾಮದ ಬಳಿ ಹರಿಯುತ್ತಿರುವ ನದಿತೀರದ ಬಂಡೆಯ ಮೇಲೆ ಹತ್ತಕ್ಕೂ ಹೆಚ್ಚು ಮೊಸಳೆಗಳು ಗೋಚರಿಸಿದವು. ಇಲ್ಲಿನ ದತ್ತಾತ್ರೇಯ ಕ್ಷೇತ್ರ ದರ್ಶನಕ್ಕೆ ಜನರು ತೆರಳಿದ್ದರು. ಬೋಟ್‌ನಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಆ ವೇಳೆ ಮೊಸಳೆಗಳು ಬಂಡೆಯ ಮೇಲೆ ಮಲಗಿದ್ದವು. ಈ ದೃಶ್ಯ ನೋಡಿ ಜನರು ಚೀರಿದ್ದು, ತಕ್ಷಣ ಮೊಸಳೆಗಳು ನದಿಗಿಳಿದು ಹೋಗಿವೆ.
ಕೃಷ್ಣ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ನದಿ ತೀರದ ಗ್ರಾಮಗಳ ಬಳಿ ಹೆಚ್ಚಿನ ಸಂಖ್ಯೆಯ ಮೊಸಳೆಗಳು ಪ್ರತ್ಯಕ್ಷವಾಗುತ್ತಿದೆ. ಮೊಸಳೆಗಳು ಇದ್ದರೂ ನದಿ ತೀರದಲ್ಲಿ ಎಚ್ಚರಿಕೆಯ ಸಂದೇಶಗಳನ್ನು ಅಳವಡಿಸಿಲ್ಲ. ಮೊಸಳೆಗಳು ಹೆಚ್ಚಿರುವ ನದಿತೀರದ ಭಾಗಗಳಲ್ಲಿ ಎಚ್ಚರಿಕೆಯ ಸಂದೇಶಗಳನ್ನು ಹಾಕುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Tiger viral video: ಮಳೆ ನೀರು ಕುಡಿದು ದಣಿವಾರಿಸಿಕೊಂಡ ವ್ಯಾಘ್ರ: ಬಂಡೀಪುರದಲ್ಲಿ ಸೆರೆಸಿಕ್ಕ ದೃಶ್ಯ ನೋಡಿ
ಈ ಬಗ್ಗೆ ಜಿಲ್ಲಾ ಅರಣ್ಯ ಇಲಾಖೆಯ ಡಿಎಫ್‌ಸಿಒ ಚಂದ್ರಣ್ಣ ಎ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, "ಕೃಷ್ಣ ನದಿ ಮೊಸಳೆಗಳ ಮೆಚ್ಚಿನ ತಾಣ. ಇಲ್ಲಿ ಹೆಚ್ಚಿನ ಸಂಖ್ಯೆಯ ಮೊಸಳೆಗಳು ವಾಸಿಸುತ್ತಿವೆ. ಹೀಗಾಗಿ ಇದನ್ನು ವೈಲ್ಡ್ ಲೈಫ್ ತಾಣ ಮಾಡುವ ಹಿನ್ನೆಲೆಯಲ್ಲಿ ತಾಲೂಕು ಅಧಿಕಾರಿಗಳಿಗೆ ಸರ್ವೇ ಮಾಡಿ ವರದಿ ನೀಡುವಂತೆ ತಿಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ವೈಲ್ಡ್ ಲೈಫ್ ತಾಣ ಮಾಡುವ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಬೇಕೆಂಬ ಚಿಂತನೆಯಿದೆ" ಎಂದರು.