ದೈಹಿಕ ಶಿಕ್ಷಕರ ವರ್ಗಾವಣೆ ವಿರೋಧ: ಶಾಲಾ ಕೊಠಡಿಗೆ ಬೀಗ ಹಾಕಿ ಆವರಣದಲ್ಲೇ ಮಕ್ಕಳಿಗೆ ಪಾಠ - ETV Bharath Kannada news
🎬 Watch Now: Feature Video
ಧಾರವಾಡ: ದೈಹಿಕ ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಇಂದು ನಡೆದಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು. ವರ್ಗಾವಣೆಯಾದ ಶಿಕ್ಷಕರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿದರು.
ಶಾಲೆಯ ಕೊಠಡಿಗಳಿಗೆ ಬೀಗ ಹಾಕಿ ವಿದ್ಯಾರ್ಥಿಗಳಿಗೆ ಮೈದಾನದಲ್ಲಿಯೇ ಪಾಠ ಮಾಡಲಾಗುತ್ತಿದೆ. ಗ್ರಾಮೀಣ ಶಾಲೆಯಾದರೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟು ವಿದ್ಯಾರ್ಥಿ ಬಲವಿರುವ ಶಾಲೆಯಲ್ಲಿ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ಇತ್ತು. ಆದರೆ, ದೈಹಿಕ ಶಿಕ್ಷಕರ ವರ್ಗಾವಣೆಯಿಂದ ಶಾಲೆಯ ಆಟೋಟಗಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿ ವಿದ್ಯಾರ್ಥಿಗಳ ಜತೆ ಪೋಷಕರು, ಶಾಲೆಯ ಎಸ್ಡಿಎಂಸಿ ಸದಸ್ಯರು ಪ್ರತಿಭಟಿಸುತ್ತಿದ್ದಾರೆ.
ಎಸ್ಡಿಎಂಸಿ ಅಧ್ಯಕ್ಷ ಗಂಗಪ್ಪ ಕಾಲವಾಡ,"ನಮ್ಮದು ಶತಮಾನ ಕಂಡ ಶಾಲೆ. ದೈಹಿಕ ಶಿಕ್ಷಕರ ವರ್ಗಾವಣೆ ಮಾಡಲಾಗುತ್ತಿದೆ. ಅವರನ್ನು ಬಿಡುಗಡೆ ಮಾಡಲು ನಮ್ಮ ಅಭ್ಯಂತರವಿಲ್ಲ, ಆದರೆ ನಮ್ಮ ಶಾಲೆಗೆ ದೈಹಿಕ ಶಿಕ್ಷಕರ ಒದಗಿಸಬೇಕು. ಕಳೆದ ಬಾರಿ ಜಿಲ್ಲಾ ಮಟ್ಟದವರೆಗೆ ಮಕ್ಕಳು ಗೆದ್ದಿದ್ದಾರೆ. ದೈಹಿಕ ಶಿಕ್ಷಕರಿಲ್ಲದೇ ಈ ವರ್ಷ ಮಕ್ಕಳು ಹೇಗೆ ಕ್ರೀಡೆಯಲ್ಲಿ ಭಾಗವಹಿಸುವುದು"ಎಂದು ಪ್ರಶ್ನಿಸಿದ್ದಾರೆ.
"ಅಲ್ಲದೇ ಈ ಶಾಲೆ ಮುಖ್ಯೋಪಾಧ್ಯಾಯರು ಸಹ ಇಲ್ಲ. ಕೇವಲ 6 ಜನ ಶಿಕ್ಷಕರು ಇದ್ದು ಅವರು ತರಗತಿಗಳನ್ನು ನೋಡಿಕೊಳ್ಳುತ್ತಾರೆ. ಇದರಿಂದ ಹಳೆಯ ವಿದ್ಯಾರ್ಥಿಗಳಿಗೆ ದಾಖಲಾತಿ ಪಡೆಯಲು ಕಷ್ಟವಾಗುತ್ತಿದೆ. ಎರಡು ಶಾಲೆಗಳನ್ನು ಒಂದು ಮಾಡಿದ್ದರಿಂದ 210 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ದೈಹಿಕ ಶಿಕ್ಷಕರ ನೇಮಕ ಆಗುವವರೆಗೆ ಹೋರಾಟ ನಡೆಸುತ್ತೇವೆ" ಎಂದು ಗಂಗಪ್ಪ ತಿಳಿಸಿದರು.
ಇದನ್ನೂ ಓದಿ: 1ರಿಂದ 5ನೇ ತರಗತಿ ವರೆಗೆ ಒಬ್ಬರೇ ಶಿಕ್ಷಕ: ಶಾಲೆಗೆ ಬರಲು ವಿದ್ಯಾರ್ಥಿಗಳ ಹಿಂದೇಟು