ಬೆಂಗಳೂರಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ..ಅಬ್ಬಬ್ಬಾ 1 ಕೆಜಿಗೆ 100 ರೂ!
🎬 Watch Now: Feature Video
ಬೆಂಗಳೂರು: ಅಡುಗೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಟೊಮೆಟೊ ದರ ಗಗನಕ್ಕೇರಿದೆ. ಕಳೆದ ಒಂದು ವಾರದಿಂದ ತರಕಾರಿ ಬೆಲೆ ಬೆಂಗಳೂರಿನಲ್ಲಿ ಏರಿಕೆಯಾಗುತ್ತಿದ್ದು ಇದೀಗ ಟೊಮೆಟೊ ಬೆಲೆ 1 ಕೆಜಿಗೆ ಬರೋಬ್ಬರಿ 100 ರೂ. ವಾಗಿದೆ. ದಿಡೀರ್ ಟೊಮೆಟೊ ಬೆಲೆಯಲ್ಲಿನ ಏರಿಕೆ ಕಂಡು ಜನರು ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಆದರೆ ಪ್ರತಿ ಅಡುಗೆಗೆ ಟೊಮೊಟೊ ಅಗತ್ಯವಾಗಿರುವುದರಿಂದ ಜನ ಬೆಲೆ ಏರಿಕೆಯಾದರು ಖರೀದಿಸಬೇಕಾಗಿದೆ.
ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಿವಾಸಿ ಸೂರಜ್ ಗೌರ್ ಮೊದಲು ಒಂದು ಕೆ.ಜಿ.ಗೆ 30 ರೂಪಾಯಿಯಷ್ಟು ಇತ್ತು. ನಂತರ ಕೆಜಿಗೆ 50 ರೂಪಾಯಿ ಏರಿಕೆಯಾಯಿತು. ಆದರೆ ಈಗ ಒಂದು ಕೆಜಿ ಟೊಮೆಟೊ ದರ 100 ರ ಗಡಿಗೆ ಬಂದು ನಿಂತಿದೆ. ನಾವು ಅಸಹಾಯಕರಾಗಿದ್ದೇವೆ. ಆದರೆ ಟೊಮೆಟೊ ಅಗತ್ಯವಾದ್ದರಿಂದ ಖರೀದಿಸಬೇಕಾಗಿದೆ ಎಂದಿದ್ದಾರೆ.
ಸದ್ಯ ಕೆಜಿಗೆ 100 ರೂ ವಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಇನ್ನು ಮಾರುಕಟ್ಟೆಯಲ್ಲಿ ಕೇವಲ ಟೊಮೆಟೊ ಅಲ್ಲದೇ ಉಳಿದ ತರಕಾರಿಗಳ ಬೆಲೆಯು ಏರಿಕೆಯಾಗುತ್ತಿದೆ. ಆದರೆ ಟೊಮೆಟೊ ಒಂದೇ ಸಲ ದುಬಾರಿ ಬೆಲೆಗೆ ಏರಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ಆಘಾತವಾಗಿದೆ.
ವ್ಯಾಪಾರಸ್ಥರು ತಮ್ಮ ತರಕಾರಿ ಮಳಿಗೆ ಹಾಗೂ ಕೈ ಗಾಡಿಯಲ್ಲಿ ಟೊಮೊಟೊ ಬೆಲೆಯ ಬೋರ್ಡ್ ಹಾಕಿದ್ದಾರೆ. ಕೆಜಿಗೆ ನೂರು ರೂ. ಕ್ಯಾಶ್ ಓನ್ಲಿ ಎಂಬ ಬೋರ್ಡ್ ಹಾಕಿ, ಟೊಮೆಟೊ ಮಾರಾಟದಲ್ಲಿ ತೊಡಗಿದ್ದಾರೆ.
ಮಾಲ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಗುಣಮಟ್ಟದ ಟೊಮೆಟೊ ಕೆಜಿಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮೂರನೇ ಗುಣಮಟ್ಟದ ಟೊಮೆಟೊ ಕೆಜಿಗೆ 60 ರಿಂದ 80 ರೂ. ಗೆ ಸೇಲ್ ಆಗುತ್ತಿದೆ. ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ಟೊಮೆಟೊ ಬರುವುದು ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ.
ಆವಕ ಕಡಿಮೆ ಆಗಲು ಕಾರಣವೇನು?: ಎಲೆ ರೋಗದಿಂದಾಗಿ ಟೊಮೆಟೊ ಉತ್ಪಾದನೆಗೆ ಹೊಡೆತ ಬಿದ್ದಿದೆ. ಮತ್ತು ಮಳೆ ಇಲ್ಲದೇ ಇರುವುದು ಸಹ ಉತ್ಪಾದನೆ ಕೊರತೆಗೆ ಕಾರಣ. ಆದರೆ, ಉತ್ತಮ ಫಸಲು ಪಡೆಯುವಲ್ಲಿ ಯಶಸ್ವಿಯಾದ ರೈತರು ಈ ಹಂಗಾಮಿನಲ್ಲಿ ಸಿಗುತ್ತಿರುವ ಲಾಭದಿಂದ ಸಂತಸಗೊಂಡಿದ್ದಾರೆ. ಇತ್ತೀಚೆಗಷ್ಟೇ ಟೊಮೆಟೊ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರು ಬೆಳದ ಇಡೀ ಬೆಳೆಯನ್ನು ರಸ್ತೆಗೆ ಎಸೆದು ಪ್ರತಿಭಟನೆ ನಡೆಸಿದ್ದರು.
ಗ್ರಾಹಕರ ಜೇಬಿಗೆ ಕತ್ತರಿ - ಬದಲಿ ಬಳಕೆ: ಕಡಿಮೆ ಬಜೆಟ್ನಲ್ಲಿ ಸಂಸಾರ ನಡೆಸುತ್ತಿರುವ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳು, ಟೊಮೆಟೊ ಬದಲಿಗೆ ಹುಣಸೆಹಣ್ಣು ಹಾಕಿ ಅಡುಗೆ ತಯಾರಿಸಿದ್ದಾರೆ. ಹೋಟೆಲ್‌ಗಳು ಸಹ ಟೊಮೆಟೊ ಬಳಸುವುದನ್ನು ನಿಲ್ಲಿಸಿವೆ ಮತ್ತು ಹೆಚ್ಚಿನವರು ಟೊಮೆಟೊ ಸೂಪ್ ಅನ್ನು ಮೆನುವಿನಿಂದ ತೆಗೆದಿದ್ದಾರೆ.
ಇದನ್ನೂ ಓದಿ: Price hike: ಗಗನಕ್ಕೇರಿದ ದಿನಸಿ ಹಾಗೂ ತರಕಾರಿ ಬೆಲೆ: ಖರೀದಿಗೆ ಜನರ ಹಿಂದೇಟು, ವ್ಯಾಪಾರಿಗಳು ಕಂಗಾಲು