ನಾನು ಏನೂ ಹೇಳಲ್ಲ, ಈಗ ಮೌನಕ್ಕೆ ಜಾರುವೆ, ಮುಂದೆ ಮಾತನಾಡುವೆ: ಮುರುಘಾ ಶ್ರೀ - ಮುರುಘಾ ಸ್ವಾಮೀಜಿ ಪ್ರಕರಣ
🎬 Watch Now: Feature Video
Published : Nov 21, 2023, 8:31 AM IST
ದಾವಣಗೆರೆ: ಪೋಕ್ಸೋ ಪ್ರಕರಣದಲ್ಲಿ ಸೋಮವಾರ ಮಧ್ಯಾಹ್ನ ಬಂಧನವಾಗಿದ್ದ ಮುರುಘಾ ಶರಣರು ರಾತ್ರಿ ವೇಳೆ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿ ದಾವಣಗೆರೆ ವಿರಕ್ತ ಮಠಕ್ಕೆ ವಾಪಸ್ ಆದರು. ಶ್ರೀಗಳನ್ನು ಭಕ್ತರು ಸ್ವಾಗತಿಸಿದರು. ಮಠಕ್ಕೆ ಆಗಮಿಸಿದ ಶರಣರು, ಬಸವಣ್ಣನವರ ಮೂರ್ತಿಗೆ ಹೂ ಮಾಲೆ ಹಾಕಿದರು. ಆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ಈ ಬಗ್ಗೆ ಸದ್ಯಕ್ಕೆ ಏನೂ ಹೇಳೋದಿಲ್ಲ. ಮುಂದೆ ಎಲ್ಲವೂ ಗೊತ್ತಾಗಲಿದೆ. ಷಡ್ಯಂತ್ರನೋ, ಯಾವ ಯಂತ್ರನೋ ಗೊತ್ತಿಲ್ಲ. ಸದ್ಯ ಮತ್ತೆ ಮೌನಕ್ಕೆ ಜಾರುತ್ತೇವೆ, ಮೌನವೇ ಕೆಲಸ ಮಾಡುತ್ತದೆ. ಸೂಕ್ತ ಸಂದರ್ಭದಲ್ಲಿ ಮಾತನಾಡುತ್ತೇನೆ. ಭಕ್ತರಿಗೆ ಯಾವುದೇ ಸಂದೇಶ ನೀಡಲ್ಲ. ಅವರಿಗೆ ದಿನದಿಂದ ದಿನಕ್ಕೆ ಎಲ್ಲ ಮಾಹಿತಿ ತಿಳಿಯುತ್ತದೆ" ಎಂದು ಹೇಳಿದರು.
ಮಠದ ವಕ್ತಾರ ಜಿತೇಂದ್ರ ಪ್ರತಿಕ್ರಿಯಿಸಿ, "ಎರಡೂ ಪ್ರಕರಣದ ವಿಚಾರಣೆಗೆ ತಡೆ ತಂದಿದ್ದೇವೆ. ಈಗ ಶ್ರೀಗಳು ಬಿಡುಗಡೆ ಆಗಿದ್ದಾರೆ. ಚಿತ್ರದುರ್ಗಕ್ಕೆ ಪ್ರವೇಶ ಇಲ್ಲದ ಕಾರಣ ದಾವಣಗೆರೆ ಮಠಕ್ಕೆ ಕರೆದುಕೊಂಡು ಬಂದಿದ್ದೇವೆ. ಮುಂದಿನ ಕಾನೂನು ಪ್ರಕ್ರಿಯೆಯನ್ನು ನಮ್ಮ ವಕೀಲರು ನಿರ್ಧರಿಸುವರು" ಎಂದರು.
ಮೊದಲನೇ ಪ್ರಕರಣದಲ್ಲಿ ಕಳೆದ ವಾರ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾಗಿದ್ದರು. ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಚಿತ್ರದುರ್ಗ ಕೋರ್ಟ್ ವಿಚಾರಣೆ ನಡೆಸಿ ಬಂಧನ ವಾರೆಂಟ್ ಜಾರಿ ಮಾಡಿತ್ತು. ಆ ಬಳಿಕ ಬಂಧನಕ್ಕೆ ತಡೆಯಾಜ್ಞೆ ಕೋರಿ ಸ್ವಾಮೀಜಿ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನ್ಯಾಯಾಂಗ ಬಂಧನಕ್ಕೆ ತಡೆಯಾಜ್ಞೆ ಕೊಟ್ಟಿದ್ದರಿಂದ ಶ್ರೀಗಳನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಎರಡನೇ ಪೋಕ್ಸೋ ಪ್ರಕರಣ: ಮುರುಘಾ ಶ್ರೀಗಳ ಬಂಧನ ಆದೇಶ ರದ್ದುಪಡಿಸಿದ ಹೈಕೋರ್ಟ್