ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಿಂದ ಆಯೋಜಿಸಲಾಗುತ್ತಿರುವ 22ನೇ ಚಿತ್ರ ಸಂತೆ ಮುಂದಿನ ಭಾನುವಾರ ಜನವರಿ 5 ರಂದು ಚಿತ್ರಕಲಾ ಪರಿಷತ್ತಿನ ಆವರಣ, ಕುಮಾರಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ, ಗಾಂಧಿಭವನ ರಸ್ತೆಗಳಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 9 ಘಂಟೆಯವರೆಗೆ ಆಯೋಜಿಸಲಾಗಿದೆ. ಮುಖ್ಯವಾಗಿ ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣು ಮಗುವಿಗಾಗಿ ಸಮರ್ಪಿಸಿರುವುದು ವಿಶೇಷ.
ಚಿತ್ರಸಂತೆಯ ಕುರಿತು ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, 20 ರಾಜ್ಯಗಳಿಂದ ಸುಮಾರು 1500 ಕಲಾವಿದರ ಕಲಾಕೃತಿಗಳು ಚಿತ್ರಸಂತೆಯಲ್ಲಿ ಪ್ರದರ್ಶನಗೊಳ್ಳಲಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ದೆಹಲಿ, ಪಾಂಡಿಚೇರಿ, ಗುಜರಾತ್ ಸೇರಿ ಮೊದಲಾದ ರಾಜ್ಯಗಳಿಂದ 3177 ಕಲಾವಿದರು ಭಾಗವಹಿಸಲು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಚಿತ್ರಸಂತೆಯ ನೋಂದಣಿ, ಅರ್ಜಿ ಸಲ್ಲಿಕೆ, ನೋಂದಣಿ ಶುಲ್ಕ ಪಾವತಿ, ಚಿತ್ರಸಂತೆಯಲ್ಲಿ ಭಾಗವಹಿಸಲು ಕಲಾವಿದರ ಆಯ್ಕೆ ಹಾಗೂ ಆಯ್ಕೆಯಾದ ಕಲಾವಿದರಿಗೆ ಮಳಿಗೆ ವಿತರಣೆ ಮಾಡುವ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಾಡಲಾಗುತ್ತಿದೆ. ಚಿತ್ರಸಂತೆ ಕಾರ್ಯಕ್ರಮ ಆಯೋಜನೆಯ ಸಲುವಾಗಿ ವೆಬ್ ಸೈಟ್ www.chitrasanthe.in ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಬೇಕಿದೆ, ನೋಂದಣಿ ಅರ್ಜಿ ಶುಲ್ಕ ಸಹ ಇರಲಿದೆ. ಪ್ರತಿ ಹಂತದಲ್ಲಿ ವೆಬ್ ಸೈಟ್ ಮೂಲಕವೇ ಸಂದೇಶ ರವಾನೆಯಾಗಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರದರ್ಶನ ಗ್ಯಾಲರಿಗಳಲ್ಲಿ ಚಿತ್ರಸಂತೆ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ಹಿರಿಯ ಹಾಗೂ ಹೆಸರಾಂತ ಕಲಾವಿದರು ರಚಿಸಿರುವ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಚಿತ್ರಕಲಾ ಮಹಾವಿದ್ಯಾಲಯ ಮತ್ತು ಬೆಂಗಳೂರು ಸ್ಕೂಲ್ ಆಫ್ ವಿಷ್ಯುವಲ್ ಆರ್ಟ್ಸ್ (ಸಂಜೆ ಕಾಲೇಜು) ನ ಪ್ರಾಧ್ಯಾಪಕರು ರಚಿಸಿರುವ ಕಲಾಕೃತಿಗಳ ಪ್ರದರ್ಶನವನ್ನು ಸಹ ಆಯೋಜನೆ ಮಾಡಲಾಗಿದೆ. 22ನೇ ಚಿತ್ರಸಂತೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಹಿರಿಯ ಕಲಾವಿದರಿಗೆ, ವಿಶೇಷಚೇತನರಿಗೆ ಶೌಚಾಲಯ ವ್ಯವಸ್ಥೆಯ ಮಳಿಗೆಗಳನ್ನು ಕಲ್ಪಿಸಲಿದ್ದೇವೆ. ಪರಿಷತ್ತಿನ ಆವರಣದ ಹೊರಗೆ ಕೆನರಾ ಬ್ಯಾಂಕ್ ಹಾಗೂ ಎಸ್ಬಿಐ ಬ್ಯಾಂಕಿನ ಸಂಚಾರಿ ಎಟಿಎಮ್ ಯಂತ್ರಗಳು ಸಹ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಚಿತ್ರಕಲಾ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನೊಳಗೊಂಡ ವಿವಿಧ ಉಪಸಮಿತಿಗಳು ಚಿತ್ರಸಂತೆಯ ಯಶಸ್ಸಿಗೆ ಶ್ರಮಿಸುತ್ತಿವೆ. ಚಿತ್ರಸಂತೆಯ ಕಾರ್ಯಕ್ರಮ 2003ರಲ್ಲಿ ಪ್ರಾರಂಭವಾಗಿ ಇಂದಿನವರೆಗೂ ಸತತವಾಗಿ ನಡೆಯುತ್ತಾ ಬಂದಿದೆ. ಸರ್ಕಾರ, ಕಲಾಸಕ್ತರು ಹಾಗೂ ಕಲಾವಿದರು, ಅಕ್ಕಪಕ್ಕದ ನಿವಾಸಿಗಳು, ಮಾಧ್ಯಮದವರು ನೀಡುತ್ತಿರುವ ಪ್ರೋತ್ಸಾಹ, ಮನ್ನಣೆಯಿಂದಾಗಿ ಇದು ಚಿತ್ರಕಲಾ ಪರಿಷತ್ತಿಗೆ ಸಾಧ್ಯವಾಗಿದೆ ಎಂದು ನುಡಿದರು.
ಇದನ್ನೂ ಓದಿ: ಚಿತ್ರಕಲಾ ಪರಿಷತ್ತಿನಲ್ಲಿ ರಷ್ಯಾದ ಪ್ರಸಿದ್ಧ ಕಲಾವಿದ ನಿಕೋಲಸ್ ರೋರಿಚ್ ಅಪರೂಪದ ಕಲಾಕೃತಿಗಳ ಪ್ರದರ್ಶನ