ಮೈಸೂರು: ನಗರದ ಶ್ರೀಲಕ್ಷೀ ವೆಂಕಟೇಶ್ವರ ದೇವಸ್ಥಾನದಿಂದ ಕೆಆರ್ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಇದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದೀಗ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಈ ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೈಸೂರಿನ ಪಿಕೆಟಿಬಿ (ಪ್ರಿನ್ಸಸ್ ಕೃಷ್ಣರಾಜಮಣಿ ಟ್ಯೂಬಕ್ರ್ಯುಲೋಸಿಸ್ ಹಾಸ್ಪೆಟಲ್) ರಸ್ತೆಗೆ ಪ್ರಿನ್ಸೆಸ್ ರಸ್ತೆ ಅಂತ ನಾಮಕರಣ ಮಾಡಿಲ್ಲ ಅನ್ನುವುದಾದರೆ ಸಿದ್ದರಾಮಯ್ಯ ಅವರ ಹೆಸರನ್ನು ಇಟ್ಟರೆ ತಪ್ಪಿಲ್ಲ. ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಂಸದ ಯದುವೀರ್ ಅವರು ಆ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ. ಆದರೆ ಮತ್ತೆ ಕೆಲವರು ಆ ರಸ್ತೆಗೆ ಯಾವ ಹೆಸರನ್ನು ಇಟ್ಟಿಲ್ಲ ಎನ್ನುತ್ತಾರೆ. ಒಂದು ವೇಳೆ ಆ ರಸ್ತೆಗೆ ಹೆಸರಿಟ್ಟಲ್ಲದಿದ್ದರೆ ಸಿದ್ದರಾಮಯ್ಯ ಅವರ ಹೆಸರು ಇಟ್ಟರೆ ತಪ್ಪಿಲ್ಲ" ಎಂದರು.
ಹನುಮ ಜಯಂತಿ: ಇಂದು ನಗರದಲ್ಲಿ ಆರನೇ ವರ್ಷದ ಹನುಮ ಜಯಂತಿ ಆಚರಣೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಗೆ ಆದಿ ಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಶ್ರೀಗಳು ಚಾಲನೆ ನೀಡಿದರು. ಮೆರವಣಿಗೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾಗಿ ಅಶೋಕ ರಸ್ತೆ, ಇರ್ವಿನ್ ರಸ್ತೆ, ಆಯುರ್ವೇದ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ಅರಸು ರಸ್ತೆ, ನಾರಾಯಣ ಶಾಸ್ತ್ರಿ, ಚಾಮರಾಜನಗರ ಜೋಡಿ ರಸ್ತೆ, ಗನ್ಹೌಸ್, ಹಾರ್ಡಿಂಜ್ ವೃತ್ತದ ಮೂಲಕ ಮತ್ತೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಬಂದು ಸಂಪನ್ನವಾಯಿತು. ಮೆರವಣಿಗೆಯಲ್ಲಿ ಶಾಸಕ ಜಿ. ಟಿ. ದೇವೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಮೈಸೂರಿನ ಸುಪುತ್ರ, ಅವರ ಹೆಸರನ್ನು ರಸ್ತೆಗೆ ಇಡೋದ್ರಲ್ಲಿ ತಪ್ಪೇನಿದೆ?: ಪ್ರತಾಪ್ ಸಿಂಹ