ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ: ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಸಂತೋಷ್ ಲಾಡ್
🎬 Watch Now: Feature Video
ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ 70ನೇ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದ ಆಯೋಜಕರಿಗೆ ಸಚಿವ ಸಂತೋಷ್ ಲಾಡ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಶನಿವಾರ ನಡೆಯಿತು.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕೆಸಿಡಿ ಅಥ್ಲೆಟಿಕ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂತೋಷ್ ಲಾಡ್, ಕಡಿಮೆ ಸಂಖ್ಯೆಯಲ್ಲಿ ಕ್ರೀಟಾಪಟುಗಳು ಭಾಗಿಯಾಗಿರುವ ಹಿನ್ನೆಲೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. "ಕರ್ನಾಟಕ ವಿಶ್ವವಿದ್ಯಾಲಯದ 4 ಜಿಲ್ಲೆಗಳ ಅಂತರ ಕಾಲೇಜುಗಳು ದಯವಿಟ್ಟು ಈ ರೀತಿ ಕಾಟಾಚಾರಕ್ಕೆ ಮಾಡಬೇಡಿ, ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಒಂದೆರಡು ತಿಂಗಳು ಮೊದಲೇ ತಯಾರಿ ಮಾಡಿದ್ರೆ, ಕ್ರೀಡಾಪಟುಗಳಿಗೂ ಆಸಕ್ತಿ ಇರುತ್ತದೆ" ಎಂದು ಹೇಳಿದರು.
ಕ್ರೀಡಾಪಟುಗಳಿಗೆ ಪಥಸಂಚಲನ ಮಾಡುವುದು, ಧ್ವಜ ಹೇಗೆ ಹಿಡಿಯಬೇಕು ಎಂಬುದೇ ಗೊತ್ತಿಲ್ಲದಿದ್ದರೆ ಹೇಗೆ?. ಇಂತಹ ಸಾಮಾನ್ಯ ಸಂಗತಿಗಳನ್ನು ಮೊದಲು ಕಲಿಸಿಕೊಡಿ, ಇಲ್ಲದಿದ್ದರೆ ಕ್ರೀಡಾಕೂಟ ಆಯೋಜಿಸುವುದಾದರೂ ಏಕೆ?. ಸರ್ಕಾರದಿಂದ ಅಗತ್ಯ ಸಹಕಾರ ನೀಡಲು ನಾನು ಸಿದ್ಧ, ಕ್ರೀಡಾಕೂಟದಲ್ಲಿ ಗುಣಮಟ್ಟದ ಭಾಗವಹಿಸುವಿಕೆ ಅಗತ್ಯವಾಗಿದೆ. ಕವಿವಿ ಅಡಿಯಲ್ಲಿ 280 ಪದವಿ ಕಾಲೇಜುಗಳಿದ್ದು, ಕೇವಲ 81 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ?. ಮುಂಬರುವ ದಿನಗಳಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿ ಎಂದು ಆಯೋಜಕರಿಗೆ ಸೂಚಿಸಿದರು.