ಶಿಕ್ಷಕರ ದಿನಾಚರಣೆಯಂದೇ 5 ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಶಿಕ್ಷಕರ ಮೇಲೆ ಲಾಠಿ ಚಾರ್ಜ್ - ಶಿಕ್ಷಕರ ನೇಮಕಾತಿ
🎬 Watch Now: Feature Video
Published : Sep 5, 2023, 6:53 PM IST
ಸಂಗ್ರೂರು (ಪಂಜಾಬ್) : ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆ ಮುಖ್ಯಮಂತ್ರಿ ಭಗವಂತ್ ಮಾನ್ ಮೊಗಾದಲ್ಲಿ ರಾಜ್ಯದ ಶಿಕ್ಷಕರನ್ನು ಸನ್ಮಾನ ಮಾಡುತ್ತಿದ್ದರೆ, ಮತ್ತೊಂದೆಡೆ 5,994 ಶಿಕ್ಷಕರ ನೇಮಕಾತಿಯನ್ನು ಏಕಪಟ್ಟಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸಂಗ್ರೂರಿನಲ್ಲಿರುವ ಮುಖ್ಯಮಂತ್ರಿ ಭಗವಂತ್ ಮಾನ್ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ. ಲಾಠಿ ಚಾರ್ಜ್ ವೇಳೆ ಅನೇಕ ನಿರುದ್ಯೋಗಿ ಯುವ ಶಿಕ್ಷಕರು ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ 10.30ಕ್ಕೆ ಸಂಗ್ರೂರ್ನ ವರ್ಕಾ ಪ್ಲಾಂಟ್ನಲ್ಲಿ ಜಮಾಯಿಸಿದ್ದ ಇಟಿಟಿ ಪದಾಧಿಕಾರಿಗಳು, ಮಧ್ಯಾಹ್ನದ ಹೊತ್ತಿಗೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ್ದರು. ಪ್ರತಿಭಟನಾ ಶಿಕ್ಷಕರು ಮುಖ್ಯಮಂತ್ರಿ ನಿವಾಸದತ್ತ ತಲುಪುತ್ತಿದ್ದಂತೆ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
ಇಟಿಟಿ ಕೇಡರ್ನ 5994 ಹುದ್ದೆಗಳ ನೇಮಕಾತಿಗೆ ಮಾರ್ಚ್ 5ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಜುಲೈನಲ್ಲಿ ನೇಮಕಾತಿ ಪೂರ್ಣಗೊಳಿಸುವುದಾಗಿಯೂ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಇನ್ನೂ ಈಡೇರಿಲ್ಲ. ಇದಲ್ಲದೇ ವಿಧಾನಸಭಾ ಅಧಿವೇಶನದಲ್ಲೂ ಜುಲೈ ತಿಂಗಳಿನಲ್ಲಿ 5,994 ಶಿಕ್ಷಕರನ್ನು ಶಾಲೆಗಳಿಗೆ ನೇಮಕ ಮಾಡಲಾಗುವುದು ಎಂದೂ ಘೋಷಣೆ ಮಾಡಲಾಗಿತ್ತು. ಆದರೆ ಅದ್ಯಾವುದೂ ಈಡೇರದ ಹಿನ್ನೆಲೆ ಭಾವೀ ಶಿಕ್ಷಕರು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡಿದ್ದರು.
ಇದನ್ನೂ ನೋಡಿ: ಕಾವೇರಿ ವಿಚಾರದಲ್ಲಿ ಕುರುಡಾದ ರಾಜ್ಯ ಸರ್ಕಾರ: ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಕನ್ನಡಪರ ಸಂಘಟನೆ ಆಕ್ರೋಶ