ಕುಮಾರಸ್ವಾಮಿ ಯಾರೊಂದಿಗೂ ಮೈತ್ರಿ ಬಯಸುತ್ತಿಲ್ಲ: ಚುನಾವಣೋತ್ತರ ಮೈತ್ರಿ ಬಗ್ಗೆ ದೇವೇಗೌಡರ ಮಾತು - ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ
🎬 Watch Now: Feature Video
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಯನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ತಳ್ಳಿಹಾಕಿದ್ದಾರೆ. ಯಾವುದೇ ಪಕ್ಷದ ಜೊತೆ ಮೈತ್ರಿಗೆ ಹೆಚ್ಡಿ ಕುಮಾರಸ್ವಾಮಿ ಸಿದ್ಧರಿಲ್ಲ ಎಂದು ಹೇಳುವ ಮೂಲಕ ಚುನಾವಣಾ ಮೈತ್ರಿಯನ್ನು ಅವರು ಅಲ್ಲಗೆಳೆದಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ದೇವೇಗೌಡರು, ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಕುಮಾರಸ್ವಾಮಿಯವರ ಇಚ್ಛೆಯಾಗಿದೆ. ಅಲ್ಲದೇ, ಈಗಾಗಲೇ ಪಕ್ಷದಿಂದ ಘೋಷಿಸಿರುವ ಭರವಸೆಗಳನ್ನು ಜಾರಿಗೆ ತರುವ ಗುರಿಯನ್ನು ಅವರು ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿವೈ ವಿಜಯೇಂದ್ರ ಸ್ಪರ್ಧೆ ಮಾಡದ ವಿಚಾರವಾಗಿ ಪ್ರಸ್ತಾಪಿಸಿದ ಅವರು, ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ನಿಲ್ಲಬಾರದು ಎಂದು ಯಡಿಯೂರಪ್ಪ aವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಹೀಗಾಗಿಯೇ ಇದನ್ನು ನೀವೇ ಅರ್ಥೈಸಿಕೊಳ್ಳಿ ಎಂದು ಕುಟುಕಿದರು.
ಮುಂದುವರೆದು ಮಾತನಾಡಿದ ದೇವೇಗೌಡರು, ನಾನು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ವಿರುದ್ಧ ದಾಳಿ ಮಾಡಿಲ್ಲ. ಹಾಗೆ ಕಳೆದ 10 ವರ್ಷಗಳಿಂದ ನಾನು ಪ್ರಧಾನಮಂತ್ರಿ ವಿರುದ್ಧವೂ ದಾಳಿ ನಡೆಸಿಲ್ಲ. ಚುನಾವಣೆಗಾಗಿ ಪ್ರಧಾನಿ ಅವರಿಗಾಗಲಿ ಅಥವಾ ನನಗಾಗಲಿ ಮುಜುಗರ ಉಂಟಾಗಬಾರದು. ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷ ಚುನಾವಣಾ ಕಣದಲ್ಲಿ ಹೋರಾಡುತ್ತಿವೆ. ಫಲಿತಾಂಶವನ್ನು ಈಗಾಗಲೇ ನಿರ್ಧರಿಸುವುದು ಕಠಿಣ ಎಂದರು.
ಬಹಳ ಜನರು ನಾವೇ ಬಹುಮತ ಪಡೆಯುತ್ತೇವೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಕೆಲವರು ಅತಂತ್ರ ವಿಧಾನಸಭಾ ನಿರ್ಮಾಣವಾಗಲಿದೆ ಎನ್ನುತ್ತಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳ ಕುರಿತ ಮಾಡಿದ ಸಮೀಕ್ಷೆಗಳಲ್ಲಿ ಹೆಚ್ ಡಿ ಕುಮಾರಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆ ಕುಮಾರಸ್ವಾಮಿ 123 ಸ್ಥಾನಗಳ ಪಡೆಯುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿ ಆಗುವ ಸಲುವಾಗಿ ಕುಮಾರಸ್ವಾಮಿ ಈ ಹೋರಾಟ ಮಾಡುತ್ತಿಲ್ಲ. ತಾವು ಘೋಷಿಸುವ ಯೋಜನೆಗಳ ಅನುಷ್ಠಾನಕ್ಕಾಗಿ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವಂತೆ ಕೇಳುತ್ತಿದ್ದಾರೆ ಎಂದು ದೇವೇಗೌಡರು ಹೇಳಿದರು.
ಇದನ್ನೂ ಓದಿ: ಹಾಸನವೂ ಸೇರಿ ನಾಳೆ/ನಾಡಿದ್ದು 2ನೇ ಪಟ್ಟಿ ಬಿಡುಗಡೆ: ಹೆಚ್‌ಡಿಕೆ