ದೇವಸ್ಥಾನದ ಮುಂದೆ ತಮಿಳು ಹಾಡಿಗೆ ಕುಣಿದ ಕೇರಳ ಪೊಲೀಸ್ ಸಸ್ಪೆಂಡ್- ವಿಡಿಯೋ - ದೇವಸ್ಥಾನದ ಮುಂದೆ ತಮಿಳು ಹಾಡಿಗೆ ಕುಣಿದ ಕೇರಳ ಪೊಲೀಸ್
🎬 Watch Now: Feature Video
ಇಡುಕ್ಕಿ (ಕೇರಳ): ದೇವಸ್ಥಾನದ ಉತ್ಸವದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯೇ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಪೂಪ್ಪಾರ ಮಾರಿಯಮ್ಮ ದೇಗುಲದಲ್ಲಿ ನಿನ್ನೆ(ಗುರುವಾರ) ಜರುಗಿದ ಉತ್ಸವದಲ್ಲಿ ಘಟನೆ ನಡೆಯಿತು.
ಶಾಂತನಪರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಪಿ.ಶಾಜಿ ಹಾಗೂ ತಂಡ ಉತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ದೇವಸ್ಥಾನಕ್ಕೆ ಆಗಮಿಸಿದ್ದರು. ಅಷ್ಟರಲ್ಲಿ 'ಮರಿಯಮ್ಮ ಕಾಳಿಯಮ್ಮ' ಎಂಬ ತಮಿಳು ಹಾಡು ಕೇಳಿದ ಎಸ್‌ಐ ಡ್ಯಾನ್ಸ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿ ನೃತ್ಯ ಮಾಡುತ್ತಿದ್ದುದನ್ನು ಅಲ್ಲಿ ನೆರೆದಿದ್ದವರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ನೃತ್ಯ ನಿಲ್ಲಿಸದೇ ಇರುವುದನ್ನು ಕಂಡ ಸ್ಥಳೀಯರು ಅಧಿಕಾರಿಯನ್ನು ತರಾಟೆಗೂ ತೆಗೆದುಕೊಂಡಿದ್ದರು.
ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ನೂರಾರು ಮಂದಿ ಉತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದರು. ಕೇರಳ-ತಮಿಳುನಾಡು ಗಡಿ ಜಿಲ್ಲೆ ಇಡುಕ್ಕಿಯ ಹೈ-ರೇಂಜ್ ಪ್ರದೇಶಗಳಲ್ಲಿ, ತಮಿಳು ಸಂಸ್ಕೃತಿಯ ದೇವಾಲಯಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಜನರು 'ಮರಿಯಮ್ಮನ್' ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಆದರೆ ಸಬ್ ಇನ್ಸ್ಪೆಕ್ಟರ್ ಸ್ಥಳದಲ್ಲಿ ಡ್ಯಾನ್ಸ್ ಮಾಡಿರುವುದು ಸ್ಥಳೀಯರಲ್ಲಿ ಅಸಮಾಧಾನ ಉಂಟುಮಾಡಿದೆ. ದೃಶ್ಯಾವಳಿಗಳಲ್ಲಿ, ಸ್ಥಳೀಯರು ಮಧ್ಯಪ್ರವೇಶಿಸಿ ಎಸ್‌ಐ ನೃತ್ಯ ಮಾಡದಂತೆ ತಡೆಯುವುದನ್ನು ಕಾಣಬಹುದು. ಘಟನೆಗೆ ಸಂಬಂಧಿಸಿದಂತೆ ಕೆ.ಪಿ.ಶಾಜಿ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯದ ವೇಳೆ ಸಾರ್ವಜನಿಕವಾಗಿ ನೃತ್ಯ ಮಾಡಿದ್ದಕ್ಕಾಗಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ನೋಡಿ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಂಭ್ರಮದ ತೆಪ್ಪೋತ್ಸವ.. ಬಾಣ ಬಿರುಸುಗಳ ಚಿತ್ತಾರದ ಮೆರುಗು