ತುಮಕೂರು: "ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಉಪಮುಖ್ಯಮಂತ್ರಿಯಾಗಬೇಕು ಮತ್ತು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬ ಕುರಿತು 2023ರ ಮೇ 18ರಂದು ಎಐಸಿಸಿ ಹೊರಡಿಸಿರುವ ನೋಟಿಫಿಕೇಶನ್ನಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ಸ್ಪಷ್ಟಪಡಿಸಬೇಕೆಂದು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ" ಎಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಮುಖಂಡರ ಬಳಿ ದೆಹಲಿಯಲ್ಲಿ ಇದನ್ನು ಪ್ರಸ್ತಾಪಿಸಿದ್ದೇನೆ. ಅವರ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೇನೆ ಎಂದರು.
"ಅಹಿಂದ ಸಮಾವೇಶಕ್ಕೆ ಕುರಿತಂತೆ ಈಗಾಗಲೇ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ. ಅದರಲ್ಲಿ ಚಿತ್ರದುರ್ಗ ದಾವಣಗೆರೆ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಜಿಲ್ಲೆಯನ್ನು ಅಂತಿಮಗೊಳಿಸಲಾಗುವುದು" ಎಂದು ತಿಳಿಸಿದರು.
''ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹೀಗಾಗಿ ದಲಿತ ಮುಖ್ಯಮಂತ್ರಿ ಕುರಿತ ಪ್ರಸ್ತಾಪ ಅನಾವಶ್ಯಕವಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಜೊತೆ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಅದರಲ್ಲಿ ವಿಧಾನ ಪರಿಷತ್ಗೆ ನಾಮಕರಣ ಸದಸ್ಯರ ನೇಮಕದಲ್ಲಿ ಇದುವರೆಗೂ ಅಧಿಕಾರ ವಂಚಿತ ಸಣ್ಣ ಜಾತಿಗಳನ್ನು ಪರಿಗಣಿಸಬೇಕೆಂದು ಸೇರಿದಂತೆ ಪಕ್ಷದ ಸಂಘಟನೆ ದೃಷ್ಟಿಯಿಂದ ಅಗತ್ಯವಿರುವ ಕ್ರಮಗಳ ಬಗ್ಗೆ ಮಾತನಾಡಿದ್ದೇನೆ" ಎಂದು ಹೇಳಿದರು.
''ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಈಗಿನ ಐದು ವರ್ಷ ಸೇರಿದಂತೆ ಮುಂದಿನ 10 ವರ್ಷದವರೆಗೂ ಕೂಡ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ'' ಎಂದು ಸಚಿವ ಅಭಿಪ್ರಾಯ ವ್ಯಕ್ತಪಡಿಸಿದ್ರು.
2004ರಲ್ಲಿ ಖರ್ಗೆ ಸಿಎಂ ಆಗಬೇಕಿತ್ತು. ಆಗ ದೇವೇಗೌಡ್ರು, ಧರಂ ಸಿಂಗ್ ಅವರಿಗೆ ತಿಳಿಸಿದ್ರು. ಅಂದು ದೇವೇಗೌಡ್ರು ಸಿದ್ದರಾಮಯ್ಯಗೂ ತಪ್ಪಿಸಿದ್ರು. ದೇವೇಗೌಡ್ರಿಗೆ ಬಹಳ ಮುಂದಾಲೋಚನೆ ಇತ್ತು. ಧರಂ ಸಿಂಗ್ನ ಅವರೇ ತೆಗೆದು ಬಿಟ್ರು. ಖರ್ಗೆ ಅವರನ್ನು ತೆಗೆದಿದ್ರೆ ಸುಮ್ಮನೆ ಬಿಡ್ತಿದ್ರಾ?" ಎಂದು ಕೇಳಿದರು.
"ಜಾತಿ ಗಣತಿ ಸಮಗ್ರವಾದ ವಿಚಾರ ಯಾರಿಗೂ ಗೊತ್ತಿಲ್ಲ. ಅದನ್ನು ಟ್ರೆಜರಿಯಲ್ಲಿ ಇಟ್ಟಿದ್ದಾರೆ. ಯಾರಿಗೂ ಸಿಕ್ಕಿಲ್ಲ. ಮುಂದಿನ ತಿಂಗಳು ಕ್ಯಾಬಿನೆಟ್ನಲ್ಲಿ ಮಂಡಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮ್ಮ ಸರ್ಕಾರ ನಮ್ಮ ಪಕ್ಷ ಒಳಮೀಸಲಾತಿಗೆ ಬದ್ಧವಾಗಿದ್ದೇವೆ. ಅದನ್ನು ಮಾಡೋವಾಗ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಮಾಡುತ್ತೇವೆ. ಮಾಡೋವಾಗ ತರಾತುರಿಯಲ್ಲಿ ತಪ್ಪಾಗಬಾರದು. ನಾಗಮೋಹನ್ ದಾಸ್ ವರದಿಯನ್ನು ಬಳಿಕ ಮಾಡುತ್ತೇವೆ. ಅನಾನುಕೂಲ ಆಗದಂತೆ ಅದನ್ನು ಮಾಡುತ್ತೇವೆ" ಎಂದು ತಿಳಿಸಿದರು.