ಸರ್ಕಾರಿ ಶಾಲೆಗೆ ಭೂಮಿ ದಾನ, ಅದೇ ಶಾಲೆಯಲ್ಲಿ ಬಿಸಿಯೂಟ ತಯಾರಕಿ ಈ ಹುಚ್ಚಮ್ಮ; ಸಮಾಜ ಸೇವಕಿಗೆ ಅರಸಿ ಬಂತು ರಾಜ್ಯೋತ್ಸವ ಪ್ರಶಸ್ತಿ - ಹುಚ್ಚಮ್ಮ ಚೌದ್ರಿ ಸಾಧನೆ

🎬 Watch Now: Feature Video

thumbnail

By ETV Bharat Karnataka Team

Published : Oct 31, 2023, 6:33 PM IST

Updated : Nov 7, 2023, 5:58 PM IST

ಕೊಪ್ಪಳ: ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಮಂಗಳವಾರ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಯಿಂದ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕೊಪ್ಪಳ ತಾಲೂಕಿನ ಹುಚ್ಚಮ್ಮ ಚೌದ್ರಿ, ಮೋರನಾಳ ಗ್ರಾಮದ ತೊಗಲು ಗೊಂಬೆಯಾಟ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ ಹಾಗೂ ಕಾರಟಗಿ ತಾಲೂಕಿನ ಸಿದ್ದಾಪುರದ ಗುಂಡಪ್ಪ ವಿಭೂತಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಅರ್ಜಿ ಹಾಕದೇ ಇರುವ ಸಮಾಜ ಸೇವಕಿ ಕೊಪ್ಪಳ ತಾಲೂಕಿನ ಕುಣಿಕೇರಿಯ ಹುಚ್ಚಮ್ಮ ಚೌದ್ರಿಗೆ ಪ್ರಶಸ್ತಿ ಅರಸಿ ಬಂದಿದ್ದು, ಪ್ರಶಸ್ತಿಯ ಗೌರವವೇ ಹೆಚ್ಚಿದಂತಾಗಿದೆ. 

68 ವರ್ಷದ ಹುಚ್ಚಮ್ಮ ಚೌದ್ರಿ ಅವರಿಗೆ ಮಕ್ಕಳಾಗಿಲ್ಲ. ತಮ್ಮ ಉಪಜೀವನಕ್ಕಿದ್ದ ಕೇವಲ 2 ಎಕರೆ ಭೂಮಿಯನ್ನು ತನ್ನೂರಿನ ಶಾಲೆಗೆ ದಾನವಾಗಿ ನೀಡಿದ್ದಾರೆ. ತನ್ನ ಜೀವನಕ್ಕೆ ಇದೇ ಶಾಲೆಯಲ್ಲಿ ಬಿಸಿಯೂಟ ತಯಾರಕಳಾಗಿ ಕೆಲಸ ಮಾಡುತ್ತ, ಶಾಲಾ ಮಕ್ಕಳನ್ನೇ ತನ್ನ ಮಕ್ಕಳೆಂದು ತಿಳಿದು ಸಂತಸ ಪಡುತ್ತಿದ್ದಾರೆ. ಹುಚ್ಚಮ್ಮನಿಗೆ ನಾಡಿನ ಮಠಗಳು, ಸಂಘ ಸಂಸ್ಥೆಗಳು ತಾವಾಗಿಯೇ ಹುಡುಕಿಕೊಂಡು ಬಂದು ಪ್ರಶಸ್ತಿ ನೀಡಿ ಗೌರವಿಸಿವೆ. ಈ ಮಧ್ಯೆ ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯೂ ಹುಡುಕಿಕೊಂಡು ಬಂದಿರುವುದು ಜಿಲ್ಲೆಯ ಜನರಿಗೆ ಹರ್ಷ ತಂದಿದೆ.

ಈಟಿವಿ ಭಾರತದ ಜೊತೆಗೆ ಮಾತನಾಡಿದ ಹುಚ್ಚಮ್ಮ ಚೌದ್ರಿ, ''ಪ್ರಶಸ್ತಿ ಬಂದಿದ್ದು ಖುಷಿ ತರಿಸಿದೆ. ನನಗೆ ಮಕ್ಕಳಿಲ್ಲ. ಗಂಡ ಬೇಗ ತೀರಿಕೊಂಡರು. ಓರ್ವ ಮೊಮ್ಮಗಳಿದ್ದು ಇದೇ ಗ್ರಾಮದಲ್ಲಿ ಕೊಟ್ಟಿರುವೆ. ನನ್ನ ಬಳಿ ಎರಡು ಎಕರೆ ಹೊಲವಿತ್ತು. ಮೊದಲು ಒಂದು ಎಕರೆ ಶಾಲೆಗೆಂದು ದಾನವಾಗಿ ಕೊಟ್ಟೆ. ಬಳಿಕ ಮಕ್ಕಳಿಗಾಗಿ ಆಟವಾಡಲು ಮತ್ತೊಂದು ಎಕರೆ ಜಾಗ ಕೊಟ್ಟೆ. ಇದನ್ನು ಗುರುತಿಸಿ ರಾಜ್ಯ ಸರ್ಕಾರದಿಂದ ಹೀಗೊಂದು ಪ್ರಶಸ್ತಿ ನೀಡಲಾಗುತ್ತದೆ ಎಂದು ನನ್ನ ಸಂಬಂಧಿಯೊಬ್ಬರು ನನಗೆ ತಿಳಿಸಿದರು. ಬೆಂಗಳೂರಿಗೆ ಬರುವಂತೆಯೂ ಹೇಳಿದ್ದಾರೆ. ಹೋಗಿ ಪ್ರಶಸ್ತಿ ಸ್ವೀಕರಿಸುವೆ. ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯ ದಯೆಯಿಂದ ಇದೆಲ್ಲವೂ ಬಯಲಿಗೆ ಬಂದಿತು. ಆರಂಭದಲ್ಲಿ ಸ್ವಾಮೀಜಿಗಳೇ ಕರೆದು ನನ್ನನ್ನು ಸನ್ಮಾನಿಸಸಿದ್ದರು. ಹಾಗಾಗಿ ಈ ರಾಜ್ಯೋತ್ಸವ ಪ್ರಶಸ್ತಿಯನ್ನು ಅಜ್ಜನಿಗೆ ಅರ್ಪಿಸಿವೆ ಎಂದರು. 

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಸಂಭ್ರಮ: ಬೆಳಗಾವಿಯಲ್ಲಿ ಟೀಶರ್ಟ್ ಖರೀದಿ ಜೋರು.. ಕುಂದಾನಗರಿಯಿಂದ ಲಂಡನ್​ಗೂ ತಲುಪಿದ ಕನ್ನಡಾಭಿಮಾನ

Last Updated : Nov 7, 2023, 5:58 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.