ಒಂದಾಯ್ತು ನಂಡ್ರಿ-ನಮಸ್ಕಾರ: ಕನ್ನಡಿಗರು, ತಮಿಳರು ಸೇರಿ ಎಳೆದರು ತೇರು!-ವಿಡಿಯೋ ನೋಡಿ - ಕನ್ನಡಿಗರು ಮತ್ತು ತಮಿಳಿಗರು ಕಟ್ಟಿದ ತೇರು
🎬 Watch Now: Feature Video
Published : Nov 29, 2023, 10:44 AM IST
ಚಾಮರಾಜನಗರ: ರಥೋತ್ಸವ ಎಂದರೆ ಸಂಭ್ರಮ, ಸಡಗರವಷ್ಟೇ ಅಲ್ಲ ಭಾವೈಕ್ಯತೆ ಸಾರುವ ಹಬ್ಬವೂ ಹೌದು ಎಂಬುದಕ್ಕೆ ಕರ್ನಾಟಕದ ಗಡಿಯಲ್ಲಿರುವ ತಮಿಳುನಾಡಿನ ಗೇರುಮಾಳದಲ್ಲಿ ನಡೆದ ರಥೋತ್ಸವ ಸಾಕ್ಷಿಯಾಯಿತು. ಜಿಲ್ಲೆಯ ಹನೂರು ಗಡಿಯಲ್ಲಿರುವ ತಮಿಳುನಾಡಿನ ಸತ್ಯಮಂಗಲ ತಾಲೂಕಿನ ಗೇರುಮಾಳ ಗ್ರಾಮದಲ್ಲಿರುವ ಜಡೇರುದ್ರಸ್ವಾಮಿ ದೇಗುಲದಲ್ಲಿ ಮಂಗಳವಾರ ಅದ್ಧೂರಿಯಾಗಿ ರಥೋತ್ಸವ ಜರುಗಿತು. ಈ ಸಂದರ್ಭದಲ್ಲಿ ಕನ್ನಡಿಗರು ಮತ್ತು ತಮಿಳರು ಜತೆ ಸೇರಿ ತೇರನೆಳೆದು ಖುಷಿಪಟ್ಟರು.
ರಥೋತ್ಸವಕ್ಕೆ ತಮಿಳುನಾಡಿನ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ತಮಿಳುನಾಡಿನ ಗಡಿಯಲ್ಲಿರುವ ಚಾಮರಾಜನಗರ ಮಾತ್ರವಲ್ಲದೆ ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜನರೂ ಗೇರುಮಾಳದ ಜಾತ್ರೆಯಲ್ಲಿ ಪಾಲ್ಗೊಂಡರು. ಜಾತ್ರೆಯಲ್ಲಿ ಕನ್ನಡಿಗರು ಮತ್ತು ತಮಿಳರೊಂದಿಗೆ ಟಿಬೆಟಿಯನ್ನರೂ ಕಂಡುಬಂದಿದ್ದು ವಿಶೇಷವಾಗಿತ್ತು.
ಕನ್ನಡಿಗರು, ತಮಿಳಿಗರು ಕಟ್ಟಿದ ತೇರು: ಗೇರುಮಾಳದ ಜಡೆರುದ್ರಸ್ವಾಮಿ ತೇರನ್ನು ಕನ್ನಡಿಗರು ಮತ್ತು ತಮಿಳಿಗರು ಸೇರಿ ಕಟ್ಟಿದ್ದಾರೆ. ರಥೋತ್ಸವದ ಹಿಂದಿನ ದಿನವಾದ ಸೋಮವಾರ ದೇಗುಲಕ್ಕೆ ಒಡೆಯರಪಾಳ್ಯ ಟಿಬೆಟಿಯನ್ ನಿರಾಶ್ರಿತ ಕೇಂದ್ರದ ಟಿಬೆಟಿಯನ್ನರು ಭೇಟಿ ನೀಡಿ ಹಿಂದು ಧಾರ್ಮಿಕ ಸಂಪ್ರದಾಯ, ಆಚರಣೆಗಳನ್ನು ಕಣ್ತುಂಬಿಕೊಂಡರು. ಭವ್ಯ ರಥವನ್ನು ಮಂಗಳವಾರ ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದಂತೆ ಜಾತ್ರೆ ಸಂಪನ್ನಗೊಂಡಿತು. ಬೇರೆ ರಾಜ್ಯ, ಅನ್ಯ ಭಾಷಿಕರೆಂಬ ಕಾರಣಕ್ಕೆ ಇಲ್ಲಿನ ಜನರಲ್ಲಿ ಮೂಡುವ ಕಂದಕವನ್ನು ಈ ಜಾತ್ರೆ ಹೋಗಲಾಡಿಸಿತು.
ಇದನ್ನೂ ಓದಿ: ಕತ್ತಲೆಯಿಂದ ಬೆಳಕಿನೆಡೆಗೆ: 41 ಕಾರ್ಮಿಕರ ಕುಟುಂಬ ನಿರಾಳ; ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ