ಮದ್ಯದ ಅಮಲಿನಲ್ಲಿ ಸ್ನೇಹಿತನಿಗೆ ಚಾಕು ಇರಿದು ಹತ್ಯೆ: ಆರೋಪಿ ಬಂಧನ - ಕ್ಯಾಬ್ ಚಾಲಕ
🎬 Watch Now: Feature Video
Published : Nov 11, 2023, 5:03 PM IST
ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಾಕು ಇರಿದು ನಾಟಕ ಆಡಿದ್ದ ಮಾದೇಶ್ (36) ಬಂಧಿತ ಆರೋಪಿ. ನವೆಂಬರ್ 5ರಂದು ರಾಜಕುಮಾರ್ ಎಂಬ ಸ್ನೇಹಿತನಿಗೆ ಆರೋಪಿ ಚಾಕು ಇರಿದು ಹತ್ಯೆ ಮಾಡಿದ್ದ.
ಮೃತ ರಾಜಕುಮಾರ್ ಹಾಗೂ ಮಾದೇಶ್ ಸ್ನೇಹಿತರಾಗಿದ್ದರು. ಇಬ್ಬರೂ ಸಹ ಕ್ಯಾಬ್ ಚಾಲಕರಾಗಿದ್ದವರು. ನವೆಂಬರ್ 5 ರಂದು ಮದ್ಯ ಖರೀದಿಸಿ ಇಬ್ಬರೂ ಸಹ ಕೆಂಗೇರಿಯ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದರು. ಈ ವೇಳೆ ಮಾದೇಶನ ಪತ್ನಿ ಹಾಗೂ ಮಗಳ ಬಗ್ಗೆ ರಾಜಕುಮಾರ್ ನಿಂದಿಸಿ ಮಾತನಾಡಿದ್ದನು.
ಆ ಸಂದರ್ಭದಲ್ಲಿ ಕೋಪಗೊಂಡ ಮಾದೇಶ ತನ್ನ ಕಾರ್ನಲ್ಲಿದ್ದ ಚಾಕುವಿನಿಂದ ರಾಜಕುಮಾರ್ನ ಎದೆ ಭಾಗಕ್ಕೆ ಇರಿದಿದ್ದನು. ಬಳಿಕ ಗಾಬರಿಯಿಂದ ತಾನೇ ಆಸ್ಪತ್ರೆಗೆ ಕರೆದೊಯ್ದಿದ್ದನು. ನಂತರ ಆತನ ಸಂಬಂಧಿಕರಿಗೆ ಕರೆ ಮಾಡಿ ಯಾರೋ ಅಪರಿಚಿತರು ಚಾಕು ಇರಿದಿದ್ದಾರೆ ಎಂದು ನಾಟಕ ಆಡಿದ್ದನು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಪರಿಣಾಮ ರಾಜಕುಮಾರ್ ಮೃತಪಟ್ಟಿದ್ದನು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಾದೇಶನನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಅಸಲಿ ಸಂಗತಿ ಗೊತ್ತಾಯಿತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್ ತಿಳಿಸಿದ್ದಾರೆ.
ಇದನ್ನೂಓದಿ:ರೌಡಿಶೀಟರ್ ಸಹದೇವ ಹತ್ಯೆ ಪ್ರಕರಣ: ಬೆಂಗಳೂರಲ್ಲಿ ಎಂಟು ಮಂದಿ ಆರೋಪಿಗಳ ಬಂಧನ