ಕುಸ್ತಿಪಟುಗಳ ಆರೋಪ ಸಾಬೀತಾದರೆ ನೇಣಿನ ಹೇಳಿಕೆಗೆ ಬದ್ಧ: ಬ್ರಿಜ್ ಭೂಷಣ್ ಸಿಂಗ್
🎬 Watch Now: Feature Video
ಹರಿಯಾಣ: ನಾಲ್ಕು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ತಾರಾ ಕುಸ್ತಿಪಟುಗಳ ವಿರುದ್ಧ ಮತ್ತೆ ಹರಿಹಾಯ್ದಿರುವ ಭಾರತೀಯ ಕುಸ್ತಿಪಟುಗಳ ಸಂಸ್ಥೆಯ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್, ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಲ್ಲಿ ಒಂದೇ ಒಂದು ಸಾಬೀತಾದರೂ ಗಲ್ಲಿಗೇರಲು ಸಿದ್ಧ. ಈ ಹಿಂದೆಯೂ ನಾನು ಇದನ್ನು ಹೇಳಿದ್ದು, ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ನನ್ನ ವಿರುದ್ಧ ಮೊದಲು ಹಲವು ಆರೋಪ ಮಾಡಿದರು. ಅವುಗಳ ಬಳಿಕ ಮತ್ತಷ್ಟು ದೂರಿದರು. ಇದ್ಯಾವುದೂ ಸಾಬೀತಾಗುತ್ತಿಲ್ಲ. ಇದರಿಂದ ನನ್ನ ವಿರುದ್ಧ ತಮ್ಮದೇ ಭಾಷೆಯಲ್ಲಿ ಟೀಕಿಸುತ್ತಿದ್ದಾರೆ. ಅವರ ಬೇಡಿಕೆ ಏನೆಂಬುದು ತಿಳಿದಿಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದು ಪೂರ್ಣಗೊಂಡ ನಂತರ ಸತ್ಯ ಹೊರಬರಲಿದೆ. ನನ್ನ ಮೇಲೆ ಆರೋಪ ಮಾಡುತ್ತಿರುವ ಕುಸ್ತಿಪಟುಗಳ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿಲ್ಲ. ಪೊಲೀಸ್, ಕೋರ್ಟ್ ವ್ಯವಸ್ಥೆ ಅದನ್ನು ನೋಡಿಕೊಳ್ಳಲಿದೆ. ಎಲ್ಲ ಆರೋಪಗಳಿಂದ ಮುಕ್ತನಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಡಬ್ಲ್ಯೂಎಫ್ಒ ಮಾಜಿ ಅಧ್ಯಕ್ಷರ ವಿರುದ್ಧ ತಾರಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿ, 4 ತಿಂಗಳಿನಿಂದ ನಿರಂತರವಾಗಿ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಚೆಗೆ ಸಂಸತ್ ಭವನ ಮುತ್ತಿಗೆ ಯತ್ನ ನಡೆಸಿದ್ದು, ಅವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಪ್ರತಿಭಟನಾ ಸ್ಥಳವನ್ನು ತೆರವು ಮಾಡಲಾಗಿದೆ.
ಇದನ್ನೂ ಓದಿ: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಬಂಧಿಸುವಷ್ಟು ಪುರಾವೆಗಳಿಲ್ಲ, 15 ದಿನದ ಒಳಗೆ ಕೋರ್ಟ್ಗೆ ವರದಿ ಸಲ್ಲಿಕೆ: ದೆಹಲಿ ಪೊಲೀಸ್