'ಚಂದಮಾಮ'ನ ಸ್ಪರ್ಶಿಸಲು ಭಾರತದ ಕಾತರ: ಇಸ್ರೋ ಮಾಜಿ ವಿಜ್ಞಾನಿ ಮನೀಶ್ ಪುರೋಹಿತ್ ಹೇಳಿದ್ದೇನು? - etv bharat kannada
🎬 Watch Now: Feature Video
Published : Aug 22, 2023, 10:52 AM IST
|Updated : Aug 22, 2023, 11:08 AM IST
ಭಿಲ್ವಾರ (ರಾಜಸ್ಥಾನ): ಭಾರತ ಸೇರಿದಂತೆ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ 3 ಬಾಹ್ಯಾಕಾಶ ನೌಕೆ ಚಂದ್ರನೆಡೆಗೆ ಯಶಸ್ವಿಯಾಗಿ ಸಾಗುತ್ತಿದೆ. ಆಗಸ್ಟ್ 23 (ನಾಳೆ) ರಂದು ಸಂಜೆ 06:04 ನಿಮಿಷಕ್ಕೆ ಸರಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಇಳಿಯಲಿದೆ. ಕೋಟ್ಯಂತರ ಭಾರತೀಯ ಕನಸು ನನಸಾದಲ್ಲಿ ಈ 'ವಿಕ್ರಮ' ಸಾಧಿಸಿದ ವಿಶ್ವದ ನಾಲ್ಕನೇ ಮತ್ತು ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆ ಕೆಲಸ ಮಾಡಿದ್ದ ವಿಜ್ಞಾನಿಯೊಬ್ಬರು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಚಂದ್ರಯಾನ 3 ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಕುರಿತು ಮಾತನಾಡಿದ ಇಸ್ರೋ ಮಾಜಿ ವಿಜ್ಞಾನಿ ಮನೀಶ್ ಪುರೋಹಿತ್, "ಚಂದ್ರನ ಸಮೀಪಕ್ಕೆ ತಲುಪಿರುವ ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರಯಾನ 3, ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯಲು ಸಿದ್ಧವಾಗಿದೆ. ಈ ಸಾಧನೆ ಮಾಡಿದ ಮೊದಲ ದೇಶ ಭಾರತವಾಗಲಿದೆ. ಇದು ನಮಗೆ ಐತಿಹಾಸಿಕ ಕ್ಷಣ. ಏಕೆಂದರೆ ಬೇರೆ ಯಾವುದೇ ದೇಶ ಇದನ್ನು ಮಾಡುವಲ್ಲಿ ಯಶಸ್ವಿಯಾಗಿಲ್ಲ. ಇದು ಭಾರತಕ್ಕೆ ಒಂದು ದೊಡ್ಡ ಸಾಧನೆಯಾಗಲಿದೆ. ಈ ಮಿಷನ್ ಭಾರತವನ್ನು ಜಾಗತಿಕ ಶಕ್ತಿಯಾಗಿ ಪ್ರತಿನಿಧಿಸುತ್ತದೆ" ಎಂದು ಹೇಳಿದ್ದಾರೆ.
"ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಚಂದ್ರನ ಮೇಲ್ಮೈಗೆ ಸಮೀಪವಾಗಿದೆ. ಆಗಸ್ಟ್ 23ರಂದು ಚಂದ್ರಯಾನ 3 ಚಂದ್ರನಿಂದ ಕೇವಲ 25 ಕಿ.ಮೀ. ದೂರದಲ್ಲಿರುವಾಗ 'ಪವರ್ ಡಿಸೆಂಟ್' ಎಂಬ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ವೇಳೆ, ವಿಕ್ರಮ್ನಲ್ಲಿ ನಾಲ್ಕು ಎಂಜಿನ್ಗಳನ್ನು ಹಾರಿಸಲಾಗುತ್ತದೆ. ಈ ಪ್ರಕ್ರಿಯೆಯು ವಿಕ್ರಮ್ನ ಸ್ಥಾನವನ್ನೂ ಬದಲಾಯಿಸುತ್ತದೆ" ಎಂದು ತಿಳಿಸಿದರು.
"ಚಂದ್ರಯಾನ 3 ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಲ್ಯಾಂಡಿಂಗ್ ಸೈಟ್ ಅನುಕೂಲವಾಗಿದ್ದರೆ ಮಾತ್ರ, ನಾವು ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಆ ನಂತರ ನಿಧಾನವಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡುತ್ತೇವೆ. ಈ ಸಂಪೂರ್ಣ ಪ್ರಕ್ರಿಯೆಯು ಸುಮಾರು 17 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ" ಎಂದು ಅವರು ಮಾಹಿತಿ ನೀಡಿದರು.
"ಚಂದ್ರಯಾನ 2 ರಲ್ಲಿ ಮಾಡಿದ ತಪ್ಪನ್ನು ನಾವು ಈ ಬಾರಿ ತಿದ್ದಿಕೊಂಡಿದ್ದೇವೆ. ಖಂಡಿತವಾಗಿಯೂ ಚಂದ್ರಯಾನ 3 ಚಂದ್ರನ ಮೇಲ್ಮೈಯಲ್ಲಿ ಇಳಿಯುತ್ತದೆ ಎಂಬುದು 100 ಪ್ರತಿಶತ ಖಚಿತವಾಗಿದೆ. ಆ ರೀತಿಯಾಗಿ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಹಾಗಾಗಿಯೇ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ಲ್ಯಾಂಡಿಂಗ್ ಬಗ್ಗೆ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಆಗಸ್ಟ್ 23, ಸಂಜೆ 6.04 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯುವ 'ವಿಕ್ರಮ್': ಇಸ್ರೋದಿಂದ 'ಚಂದ್ರಚುಂಬನ'ದ ಅಧಿಕೃತ ಮಾಹಿತಿ