ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರೆ ನಾನು ಡಿ ಕೆ ಸುರೇಶ್ರನ್ನು ಸೋಲಿಸುತ್ತಿದ್ದೆ: ಸುರೇಶ್ ಗೌಡ
🎬 Watch Now: Feature Video
ತುಮಕೂರು: ನನಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿತ್ತು. ಚುನಾವಣೆಗೆ ಸ್ಪರ್ಧಿಸಿದ್ದರೆ ನಾನು ಡಿ.ಕೆ ಸುರೇಶ್ನನ್ನು ಸೋಲಿಸುತ್ತಿದ್ದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು. ಊರ್ಡಿಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ತುಮಕೂರು ಗ್ರಾಮಾಂತರ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಕ್ಕೆ ಮನಸ್ಸಿರಲಿಲ್ಲ. ಒಂದು ವೇಳೆ ನಾನು ಹೋಗಿದ್ರೆ, ಡಿ ಕೆ ಸುರೇಶ್ ವಿರುದ್ಧ ಗೆಲ್ಲುತ್ತಿದ್ದೆ ಎಂದರು.
'ಬಿ' ಫಾರ್ಮ್ ನನ್ನ ಕೈಗೆ ಕೊಟ್ಟಿದ್ರು. ಆದ್ರೆ, ರಾತ್ರಿ 12 ಗಂಟೆಗೆ ನಾನು ಬೇಡ ಅಂತ ವಾಪಸ್ ಕೊಟ್ಟೆ. ಯಾಕಂದ್ರೆ, ತುಮಕೂರು ಗ್ರಾಮಾಂತರ ಜನತೆ ನನ್ನ ಹೃದಯದಲ್ಲಿದ್ದಾರೆ. ಈ ಕ್ಷೇತ್ರದ ಕನಿಷ್ಠ ಹತ್ತು ಸಾವಿರ ಜನರ ಹೆಸರೇಳಬಲ್ಲೆ. ಪ್ರತಿಯೊಬ್ಬರ ಮದುವೆ, ಸಾವು, ಹೊಸಿಗೆ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಒಂದನೇ ಕ್ಲಾಸ್ ಮಕ್ಕಳಿಗೆ ಮತ ಹಾಕೋ ಪವರ್ ಇದ್ದಿದ್ದರೆ ನಾನು 50 ಸಾವಿರ ಮತಗಳ ಲೀಡ್ನಲ್ಲಿ ಗೆಲ್ಲುತ್ತಿದ್ದೆ. ಗ್ರಾಮಾಂತರದಲ್ಲಿ ಅಷ್ಟರ ಮಟ್ಟಿಗೆ ಶಾಲೆಗಳನ್ನು ಕಟ್ಟಿಸಿದ್ದೇನೆ ಎಂದು ಸುರೇಶ್ ಗೌಡ ಹೇಳಿದರು.
ಊರ್ಡಿಗೆರೆಯ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಕಾಮಗಾರಿಯಲ್ಲೂ ಶಾಸಕ ಗೌರಿಶಂಕರ್ ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ನನ್ನ ಕಾಲದಲ್ಲಿ 50 ಲಕ್ಷ ಬಿಡುಗಡೆ ಮಾಡಿದ್ದೆ. ಸೋತ ನಂತರವೂ 25 ಲಕ್ಷ ಹಣ ಕೊಡಿಸಿದ್ದೆ. ಆದ್ರೆ, ಇವರು ಐದು ಪೈಸೆ ಕೂಡ ಖರ್ಚು ಮಾಡಿಲ್ಲ, ಮೂರು ವರ್ಷದಿಂದ ಆ ಹಣವನ್ನು ಹಾಗೆ ಇಟ್ಟುಕೊಂಡಿದ್ದಾರೆ. ಆ ದುಡ್ಡಿನಲ್ಲೂ ಕಮಿಷನ್ ಕೇಳಿದ್ದಾರೆ, ಕಮಿಷನ್ ಕೊಟ್ಟಿಲ್ಲ ಅಂತ ಕಾಮಗಾರಿ ಮಾಡಿಲ್ಲ ಎಂದು ದೂರಿದರು.
ನಿನ್ನಲ್ಲಿ ಶಕ್ತಿ ಇದ್ದರೆ, ಭಕ್ತಿ ಇದ್ದರೆ, ಪ್ರಾಮಾಣಿಕತೆ ಇದ್ದರೆ ನನ್ನನ್ನು 50 ಸಾವಿರ ಮತಗಳಿಂದ ಗೆಲ್ಲಿಸು. ದೇವರೆ, ನಿನ್ನ ಕಾಮಗಾರಿಯಲ್ಲಿ ಕಮಿಷನ್ ತಿನ್ನುವ ಶಾಸಕ ಗೌರಿಶಂಕರ್ನನ್ನು ಸೋಲಿಸು. ಕೇವಲ 6 ತಿಂಗಳಲ್ಲಿ ನಿನ್ನ ಗೋಪುರ ಕಟ್ಟಿಸುತ್ತೇನೆ, ನಿನ್ನನ್ನು ಜಗತ್ ಪ್ರಸಿದ್ಧಿ ಮಾಡಿಸುತ್ತೇನೆ ಎಂದರು. ಬಳಿಕ ಬೆಳಗುಂಬ ಸಿದ್ದರಾಮೇಶ್ವರ ದೇವಾಲಯದ ಕಾಮಗಾರಿ ಸಹ ಗೌರಿ ಶಂಕರ್ ಕಮಿಷನ್ ಆಸೆಯಿಂದ ಪೂರ್ಣ ಆಗಿಲ್ಲ ಎಂದು ಸುರೇಶ್ ಗೌಡ ಆರೋಪಿಸಿದರು.
ಇದನ್ನೂ ಓದಿ: ತುಮಕೂರಿನಲ್ಲಿ ಹಾಲಿ-ಮಾಜಿ ಶಾಸಕರ ಜಟಾಪಟಿ: ಸುರೇಶ್ ಗೌಡ ಬೆಂಬಲಿಗರ ವಿರುದ್ಧ ಪ್ರಕರಣ