ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡ: ಹಗ್ಗ, ತಂತಿ ಬಳಸಿ ಕಿಟಕಿಗಳಿಂದ ಇಳಿದ ವಿದ್ಯಾರ್ಥಿಗಳು- ವಿಡಿಯೋ
🎬 Watch Now: Feature Video
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೋಚಿಂಗ್ ಸೆಂಟರ್ವೊಂದರಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿತು. ಪ್ರಾಣಾಪಾಯದಿಂದ ಪಾರಾಗಲು ವಿದ್ಯಾರ್ಥಿಗಳು ಬಹುಮಹಡಿ ಕಟ್ಟಡದ ಕಿಟಕಿಗಳಿಂದ ಹಗ್ಗ ಮತ್ತು ತಂತಿಗಳನ್ನು ಬಳಸಿ ಕೆಳಗಿಳಿದರು. ಇದರ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿವೆ.
ಮುಖರ್ಜಿ ನಗರ ಪ್ರದೇಶದ ನಾಲ್ಕಂತಸ್ತಿನ ಕೋಚಿಂಗ್ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೆಂಟರ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಹಲವಾರು ವಿದ್ಯಾರ್ಥಿಗಳು ಹಗ್ಗ ಹಾಗೂ ತಂತಿಗಳ ಸಹಾಯದಿಂದ ಕಟ್ಟಡದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್ಎಸ್) ನಿರ್ದೇಶಕ ಅತುಲ್ ಗರ್ಗ್ ಮಾತನಾಡಿ, "ಜ್ಞಾನ ಎಂಬ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಧ್ಯಾಹ್ನ 12.28ಕ್ಕೆ ಕರೆ ಬಂತು. ಅಂತೆಯೇ, ಒಟ್ಟು 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿವೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ" ಎಂದು ತಿಳಿಸಿದರು. "ಅಲ್ಲದೇ, ಎಲ್ಲ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಯಾರಿಗೂ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಕಟ್ಟಡದಲ್ಲಿ ಅಳವಡಿಸಲಾದ ವಿದ್ಯುತ್ ಮೀಟರ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ರಾತ್ರಿ ಮಲಗಿದ್ದ ವೇಳೆ ಎರಗಿದ ಜವರಾಯ, ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ 6 ಮಂದಿ ಬಲಿ