ಶಿವಾನಂದ ಪಾಟೀಲ್ ಸಚಿವರಾಗಲು ಅಲ್ಲ, ಶಾಸಕರಾಗಲೂ ಯೋಗ್ಯರಲ್ಲ: ರೈತರ ಆಕ್ರೋಶ
🎬 Watch Now: Feature Video
Published : Dec 25, 2023, 9:35 PM IST
ಹಾವೇರಿ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಬರ ಕುರಿತು ನೀಡಿದ ಹೇಳಿಕೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಹಾವೇರಿ ಜಿಲ್ಲಾ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಳ್ಳಾರಿ, ಸಚಿವರ ಬಗ್ಗೆ ಮಾತನಾಡಲು ಅಸಹ್ಯ ಎನಿಸುತ್ತದೆ. ಇವರು ಸಚಿವರಾಗಲು ಅಷ್ಟೇ ಅಲ್ಲ, ಶಾಸಕರಾಗಲೂ ಸಹ ಯೋಗ್ಯರಲ್ಲ ಎಂದರು. ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರವನ್ನು ಎರಡು ಲಕ್ಷದಿಂದ ಐದು ಲಕ್ಷ ರೂ.ಗೆ ಏರಿಸಿದ್ದರಿಂದ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಈ ಹಿಂದೆ ಕೂಡ ಶಿವಾನಂದ ಪಾಟೀಲ್ ಮಾತನಾಡಿದ್ದರು. ನಂತರ ಮಾಧ್ಯಮದವರು ತಮ್ಮ ಹೇಳಿಕೆ ತಿರುಚಿದ್ದಾರೆ. ಆದರೂ ಸಹ ರೈತರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದರು.
ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಶಿವಾನಂದ ಪಾಟೀಲರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಹಾವೇರಿ ಜಿಲ್ಲೆಯಲ್ಲಿ ಶಾಸಕರಾಗಿ ಆಯ್ಕೆಯಾದ ಐದು ಮಂದಿ ಇದ್ದಾರೆ. ಇವರಲ್ಲಿ ಯಾರನ್ನಾದರೂ ಸಚಿವರನ್ನಾಗಿ ಮಾಡಬೇಕು ಎಂದು ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದ್ದಾರೆ.
ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ್ ಮಾತನಾಡಿ, ಶಿವಾನಂದ ಪಾಟೀಲ್ ತಮ್ಮ ಅವಿವೇಕತನದ ಹೇಳಿಕೆಗಳನ್ನು ನಿಲ್ಲಿಸಬೇಕು. ರೈತ ಸಾಲ ಮಾಡಿದ್ದು ದೇಶದ ಹಸಿವು ನೀಗಿಸಲು ಹೊರತು ಮಜಾ ಮಾಡಲು ಅಲ್ಲ. ಇಂತಹ ರೈತರ
ಬಗ್ಗೆ ಕನಿಷ್ಠ ಕನಿಕರ ತೋರಿಸದ ಶಿವಾನಂದ ಪಾಟೀಲ್ ನಗೆಪಾಟಲಿಗೀಡಾಗಿದ್ದಾರೆ. ಈ ರೀತಿಯ ಹೇಳಿಕೆಗಳು ನಿಮಗೆ ಒಳ್ಳೆಯದಲ್ಲ. ನೀವು ಈ ಕೂಡಲೇ ರಾಜ್ಯದ ರೈತರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ರೈತರೇ ವಿಧಾನಸೌಧದಿಂದ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 'ಸಚಿವ ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸಿ ಅವಹೇಳನ ಮಾಡುವ ಉಸ್ತುವಾರಿ ವಹಿಸಿಕೊಟ್ಟಂತಿದೆ': ಬಿವೈ ವಿಜಯೇಂದ್ರ