ರಾಯಚೂರು: ಯುವಕನ ಮೇಲೆ ಬೀದಿ ನಾಯಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
🎬 Watch Now: Feature Video
Published : Jan 7, 2024, 3:46 PM IST
|Updated : Jan 8, 2024, 1:40 PM IST
ರಾಯಚೂರು: ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಹೋಗಿದ್ದ ವೇಳೆ ಯುವಕನ ಮೇಲೆ ಬೀದಿ ನಾಯಿ ಭಯಾನಕ ದಾಳಿ ನಡೆಸಿರುವ ಘಟನೆ ಸಿಂಧನೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಪೊಲೀಸ್ ಕಾನ್ಸ್ಟೇಬಲ್ ಪತ್ನಿ ಮಗನ ಅನಾರೋಗ್ಯದ ಹಿನ್ನೆಲೆ ಆರೋಗ್ಯ ತಪಾಸಣೆಗೆ ಹೋಗಿದ್ದರು. ಈ ಸಮಯದಲ್ಲಿ ಹೊರಗಡೆ ಬಂದು ನಿಂತಾಗ ಅಲ್ಲಿಯೇ ಇದ್ದ ಬೀದಿ ನಾಯಿ ಏಕಾಏಕಿ ಅವರ ಮಗನ ಮೇಲೆ ದಾಳಿ ನಡೆಸಿದೆ. ಆಗ ತಾಯಿ ಬಿಡಿಸಲು ಹೋಗಿದ್ದಾರೆ. ಆಗಲೂ ದಾಳಿಯನ್ನು ಮುಂದುವರಿಸಿದೆ. ಆಗ ಸ್ಥಳದಲ್ಲಿದ್ದ ಜನರು ಬಿಡಿಸಲು ಮುಂದಾಗಿದ್ದಾರೆ. ಕೊನೆಗೆ ಅದನ್ನು ಹೊಡೆದು ಓಡಿಸಿದ್ದಾರೆ. ನಾಯಿ ಕಚ್ಚಿದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆಯಿಂದ ನಾಗರಿಕರು ಬೆಚ್ಚಿಬಿದ್ದಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪತ್ನಿ ಸಹ ಗಾಯಗೊಂಡಿದ್ದಾರೆ. ಕಚ್ಚಿದ ನಾಯಿಯನ್ನು ಹುಚ್ಚು ನಾಯಿ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಈ ವಿಡಿಯೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಜನರು ಭಯಭೀತರಾಗಿದ್ದು, ಕೂಡಲೇ ನಗರಸಭೆಯು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಹಿಂದೆ ರಾಯಚೂರು ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಬೀದಿ ನಾಯಿ ಹಾಗೂ ಹುಚ್ಚು ನಾಯಿಗಳು ದಾಳಿ ಮಾಡಿರುವ ಘಟನೆಗಳು ನಡೆದಿವೆ.
ಇದನ್ನೂ ಓದಿ: ವಿಜಯಪುರದಲ್ಲಿ ಅಪ್ರಾಪ್ತರ ಮೇಲೆ ಬೀದಿ ನಾಯಿ ದಾಳಿ: ಮೂವರಿಗೆ ಗಾಯ